Home ಕರಾವಳಿ ಮಂಗಳೂರು | ಪ್ರವಾದಿ ನಿಂದನೆ ವಿರುದ್ಧ ಪ್ರತಿಭಟನೆ ಮಾಡಲ್ಲ ಎಂದು ಮುಸ್ಲಿಮ್ ಮುಖಂಡರು ಭರವಸೆ ನೀಡಿದ್ದಾರೆ:...

ಮಂಗಳೂರು | ಪ್ರವಾದಿ ನಿಂದನೆ ವಿರುದ್ಧ ಪ್ರತಿಭಟನೆ ಮಾಡಲ್ಲ ಎಂದು ಮುಸ್ಲಿಮ್ ಮುಖಂಡರು ಭರವಸೆ ನೀಡಿದ್ದಾರೆ: ಎನ್. ಶಶಿಕುಮಾರ್

ಮಂಗಳೂರು: ಪ್ರವಾದಿ ಮುಹಮ್ಮದ್ ನಿಂದನೆ ವಿರುದ್ಧ ಯಾವುದೇ ಪ್ರತಿಭಟನೆ ಮಾಡುವುದಿಲ್ಲ ಎಂದು ಮುಸ್ಲಿಮ್ ಮುಖಂಡರು ಭರವಸೆ ನೀಡಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

ಸೋಮವಾರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮುಸ್ಲಿಮ್ ಧಾರ್ಮಿಕ ಮುಖಂಡರ ಸಭೆಯನ್ನು ಕರೆಯಲಾಗಿತ್ತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕುಮಾರ್,  2022ರಲ್ಲಿ ಯಾವುದೇ ಒಂದು ಪ್ರಮುಖ ಪ್ರತಿಭಟನೆ ನಡೆದಿರದ ಕಾರಣ ಎಲ್ಲಾ ಧಾರ್ಮಿಕ ಮುಖಂಡರು ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದಾರೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಸಭೆಯಲ್ಲಿ ನಡೆದ ಚರ್ಚೆಯ ವೇಳೆ, ಅಂತಹ ಯಾವುದೇ ನಿರ್ಧಾರ ಆಗಿಲ್ಲ, ಕರೆ ನೀಡಿಲ್ಲ.  ಆಂತರಿಕ ಚರ್ಚೆಯೂ ನಡೆದಿಲ್ಲ ಎಂದು ಎಲ್ಲಾ ಧಾರ್ಮಿಕ ಮುಖಂಡರು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮುಖಂಡರನ್ನು ಕರೆಸಿ ಮಂಗಳೂರು ಪೊಲೀಸರು ಸಭೆ ನಡೆಸಿರುವುದು ಸಮುದಾಯದಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ. ಜಿಲ್ಲೆಯಲ್ಲಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಎರಡೂ ಸಮುದಾಯಗಳ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರನ್ನು ಒಳಗೊಂಡ ಜಂಟಿ ಸಭೆ ನಡೆಸಲು ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಲಾಗಿದೆ ಎಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮುಸ್ಲಿಂ ಧಾರ್ಮಿಕ ಮುಖಂಡರು ಅಭಿಪ್ರಾಯಿಸಿದ್ದಾರೆ ಎಂದು ಹೇಳಿದರು.

ಮೂಡಬಿದ್ರೆ, ಮುಲ್ಕಿ, ಬಜ್ಪೆ, ಕೊಣಾಜೆ ಸೇರಿದಂತೆ ಎಲ್ಲಾ ಠಾಣಾ ವ್ಯಾಪ್ತಿಯ 50ಕ್ಕೂ ಅಧಿಕ ಮುಖಂಡರು ಭಾಗವಹಿಸಿದ್ದರು. ಹೆಚ್ಚಿನ ಸಂಪರ್ಕ ಸಭೆ ಮಾಡಬೇಕು. ಯಾವುದೇ ಸಮಸ್ಯೆಯನ್ನು ಹಿಡಿದು ಠಾಣೆಗೆ ಹೋದಾಗ ತ್ವರಿತವಾಗಿ ಸ್ಪಂದಿಸಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಬೇಕು. ಗೊಂದಲದ ಸಂದರ್ಭ ಸಮುದಾಯ ಧಾರ್ಮಿಕ ಮುಖಂಡರನ್ನು ಕರೆಸಿ ಇಲಾಖೆಯ ಸೂಚನೆಗಳನ್ನು ಸಮುದಾಯಕ್ಕೆ ತಲುಪುವಂತೆ ಮಾಡಬೇಕು ಎಂದು ಮುಖಂಡರು ಸಭೆಯಲ್ಲಿ ಗಮನಕ್ಕೆ ತಂದಿದ್ದಾರೆ ಎಂದು ಶಶಿಕುಮಾರ್ ತಿಳಿಸಿದರು.

Join Whatsapp
Exit mobile version