ಮುಂಬೈ: ಬಿಗ್ ಬಾಸ್ 17 ರ ವಿನ್ನರ್ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರ ಹೆಸರೂ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಹಿಟ್ ಲಿಸ್ಟ್ ನಲ್ಲಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಈ ವಿಷಯ ಹೊರಬೀಳುತ್ತಿದ್ದಂತೆ ಮುನಾವರ್ ಫಾರೂಕಿಯ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ. ಕಳೆದ ತಿಂಗಳೇ ಮುನಾವರ್ ಫಾರೂಕಿಯನ್ನು ದಿಲ್ಲಿಯಲ್ಲಿ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಯತ್ನಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿಗೆ ಮುಂಬೈ ಪೊಲೀಸರು ಭಾರೀ ಭದ್ರತೆ ಒದಗಿಸಿದ್ದಾರೆ.
ದಿಲ್ಲಿಯ ಹೋಟೆಲ್ ಒಂದರಲ್ಲಿ ಮುನಾವರ್ ಫಾರೂಕಿ ಅವರ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮ ನಡೆಯುವ ದಿನವೇ ಅದೇ ಹೋಟೆಲ್ ನಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ರೂಂ ಬುಕ್ ಮಾಡಿಕೊಂಡಿತ್ತು. ಕಳೆದ ಸೆಪ್ಟೆಂಬರ್ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಈ ತಂತ್ರಗಾರಿಕೆ ಕುರಿತಾಗಿ ದಿಲ್ಲಿಯ ಬೇಹುಗಾರಿಕಾ ಪಡೆಗೆ ಮಾಹಿತಿ ಲಭ್ಯವಾಯ್ತು.
ಕೂಡಲೇ ದಿಲ್ಲಿ ಪೊಲೀಸರು ಮುನಾವರ್ ಫಾರೂಕಿ ಕಾರ್ಯಕ್ರಮ ಆಯೋಜನೆಗೊಂಡಿದ್ದ ಹೋಟೆಲ್ ಗೆ ತೆರಳಿ ಅವರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದ್ದರು. ಈ ಘಟನೆ ನಡೆದ ಬಳಿಕ ಮತ್ತೊಮ್ಮೆ ಮುನಾವರ್ ಫಾರೂಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಕೆಂಗಣ್ಣಿಗೆ ತುತ್ತಾಗಿರಲಿಲ್ಲ. ಆದರೆ ಇದೀಗ ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ದಕಿ ಅವರ ಹತ್ಯೆ ಆಗಿರುವ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರ ಮಾಹಿತಿ ಅನ್ವಯ ಮುಂಬೈ ಪೊಲೀಸರು ಮುನಾವರ್ ಫಾರೂಕಿಗೆ ಭದ್ರತೆ ಬಿಗಿಗೊಳಿಸಿದ್ದಾರೆ.