ತೆಲಂಗಾಣದಲ್ಲಿ SC ಒಳ ಮೀಸಲಾತಿ ಜಾರಿ: ಈ ನಿರ್ಣಯ ಕೈಗೊಂಡ ದೇಶದ ಮೊದಲ ರಾಜ್ಯ

- Advertisement -

ಹೈದರಾಬಾದ್: ಡಾ.ಬಿ.ಆರ್.ಅಂಬೇಡ್ಕರ್ ಅವರ 135 ಜಯಂತಿಯಂದು ಪರಿಶಿಷ್ಟ ಜಾತಿ (ಎಸ್​​ಸಿ) ಒಳಮೀಸಲಾತಿಯನ್ನು ತೆಲಂಗಾಣ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಎಸ್‌ಸಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತಂದ ದೇಶದ ಮೊದಲ ರಾಜ್ಯ ಎಂಬ ಅಭಿದಾನಕ್ಕೂ ಪಾತ್ರವಾಗಿದೆ.

- Advertisement -

ಪರಿಶಿಷ್ಟ ಜಾತಿ (ಎಸ್​ಸಿ) ಒಳಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಸರ್ಕಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ ಎಂದು ನೀರಾವರಿ ಸಚಿವ ಎನ್​.ಉತ್ತುಮ್​ಕುಮಾರ್​ ರೆಡ್ಡಿ ತಿಳಿಸಿದರು. ಅಧಿಸೂಚನೆಯ ಪ್ರತಿಯನ್ನು ಸಿಎಂಗೆ ನೀಡಿದರು.

ಮೂರು ವರ್ಗಗಳಲ್ಲಿ ವಿಂಗಡಣೆ: ಒಳಮೀಸಲಾತಿ ಕುರಿತು ವರದಿ ನೀಡಲು ತೆಲಂಗಾಣ ಸರ್ಕಾರವು, ಈ ಹಿಂದೆ ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶ ಶಮೀಮ್​ ಅಕ್ತರ್​ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಆಯೋಗವು, ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳಲ್ಲಿ 59 ಉಪ ಜಾತಿಗಳನ್ನು ಗುರುತಿಸಿತ್ತು. ಅಸ್ತಿತ್ವದಲ್ಲಿರುವ ಶೇ.15ರಷ್ಟು ಮೀಸಲಾತಿಯೊಳಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಅವುಗಳನ್ನು I, II ಮತ್ತು III ಎಂದು ವರ್ಗೀಕರಿಸಲು ಶಿಫಾರಸು ಮಾಡಿತ್ತು.

- Advertisement -

ಈ ಸಂಬಂಧ ತೆಲಂಗಾಣ ಸರ್ಕಾರ, ಪರಿಶಿಷ್ಟ ಜಾತಿಗಳ ಮೀಸಲಾತಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿದ್ದು, ಇದಕ್ಕೆ ಏಪ್ರಿಲ್ 8, 2025ರಂದು ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇಂದು (ಏಪ್ರಿಲ್ 14) ಒಳಮೀಸಲಾತಿ ಜಾರಿ ಕುರಿತು ಸರ್ಕಾರಿ ಗೆಜೆಟ್​ ಅಧಿಸೂಚನೆ ಪ್ರಕಟಿಸಲಾಗಿದೆ ಎಂದು ಒಳಮೀಸಲಾತಿ ಉಪಸಮಿತಿಯ ನೇತೃತ್ವ ವಹಿಸಿದ್ದ ಸಚಿವರು ತಿಳಿಸಿದರು.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಸರ್ಕಾರಿ ಆದೇಶದ ಮೊದಲ ಪ್ರತಿಯನ್ನು ನೀಡಲಾಗಿದೆ. ಇಂದಿನಿಂದ, ರಾಜ್ಯದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಸ್‌ಸಿ ಒಳಮೀಸಲಾತಿ ಜಾರಿಗೆ ಬಂದಿದೆ ಎಂದರು.

“ಸುಪ್ರೀಂ ಕೋರ್ಟ್‌ನ ತೀರ್ಪುಗಳ ನಂತರ ಎಸ್‌ಸಿ ಒಳಮೀಸಲಾತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ತೆಲಂಗಾಣ. ಹಿಂದಿನ ಸರ್ಕಾರಗಳು ಒಳ ಮೀಸಲಾತಿ ಕುರಿತು ನಿರ್ಣಯಗಳನ್ನು ಅಂಗೀಕರಿಸಿರಲಿಲ್ಲ. ಈ ಬಗ್ಗೆ ಯಾವುದೇ ಕ್ರಮವೂ ಕೈಗೊಂಡಿರಲಿಲ್ಲ” ಎಂದು ಟೀಕಿಸಿದರು.

“ಇನ್ನು ಮುಂದೆ, ಸರ್ಕಾರಿ ಎಲ್ಲಾ ಹುದ್ದೆಗಳನ್ನು ಎಸ್‌ಸಿ ಒಳ ಮೀಸಲಾತಿಯ ಪ್ರಕಾರ ಭರ್ತಿ ಮಾಡಲಾಗುವುದು. 2026 ರ ಜನಗಣತಿಯಲ್ಲಿ ಎಸ್‌ಸಿ ಜನಸಂಖ್ಯೆ ಹೆಚ್ಚಾದರೆ, ಅದಕ್ಕೆ ಅನುಗುಣವಾಗಿ ಮೀಸಲಾತಿ ಹೆಚ್ಚಲಿದೆ” ಎಂದು ಹೇಳಿದರು.

- Advertisement -


Must Read

Related Articles