Home ಕರಾವಳಿ ಶಾಸಕ ಹರೀಶ್ ಪೂಂಜಾ ಪಲ್ಲಕ್ಕಿ ಹೊತ್ತ ವಿಚಾರ| ಅವಕಾಶ ಕಲ್ಪಿಸಿದ GSB ಯುವಕರಿಂದ ಕ್ಷಮೆಯಾಚನೆ

ಶಾಸಕ ಹರೀಶ್ ಪೂಂಜಾ ಪಲ್ಲಕ್ಕಿ ಹೊತ್ತ ವಿಚಾರ| ಅವಕಾಶ ಕಲ್ಪಿಸಿದ GSB ಯುವಕರಿಂದ ಕ್ಷಮೆಯಾಚನೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ (ಜಿ.ಎಸ್.ಬಿ)ದ ಲಾಯಿಲ ವೆಂಕಟರಮಣ ದೇವಸ್ಥಾನದ ದೇವರ ಪಲ್ಲಕ್ಕಿಯನ್ನು ಸಂಪ್ರದಾಯ ಮುರಿದು ಹೊತ್ತ ಶಾಸಕ ಹರೀಶ್ ಪೂಂಜಾ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹರೀಶ್ ಪೂಂಜಾರನ್ನು ಪಲ್ಲಕ್ಕಿ ಹೊರಲು ಕರೆತಂದ ಇಬ್ಬರು ಜಿ.ಎಸ್.ಬಿ ಯುವಕರು, ಸ್ವಾಮೀಜಿಗಳು ಸೂಚಿಸಿದಂತೆ ಇಂದು ಶಾಸ್ತ್ರೋಕ್ತವಾಗಿ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆಯಾಚಿಸಿದರು.


ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಡಳಿತಕ್ಕೆ ಒಳಪಟ್ಟ ಬೆಳ್ತಂಗಡಿ ಲಾಯಿಲ ವೆಂಕಟರಮಣ ದೇವರ ಪಲ್ಲಕ್ಕಿ ಹೊರಲು ಕಾರ್ತಿಕ ಹುಣ್ಣಿಮೆಯ ದೀಪೋತ್ಸವದಂದು ಹರೀಶ್ ಪೂಂಜಾರಿಗೆ ಅವಕಾಶ ನೀಡಿದ ಇಬ್ಬರು ಜಿ.ಎಸ್.ಬಿ ಯುವಕರಿಗೆ ಕಾಶೀ ಮಠದ ಸಂಯಮೀಂದ್ರ ಸ್ವಾಜೀಮಿಯವರು ದೇವರ ನಡೆಯಲ್ಲಿ ತೆಂಗಿನಕಾಯಿ ಇಟ್ಟು ದೇವರಲ್ಲಿ ತಮ್ಮಿಂದಾದ ಪ್ರಮಾದದ ಬಗ್ಗೆ ತಪ್ಪು ನಿವೇದನೆ ಮಾಡಿ ಕ್ಷಮಾಪಣೆ ಕೇಳಬೇಕೆಂದು ಸೂಚಿಸಿದ್ದರು. ಅದರಂತೆ ಬುಧವಾರ ಈ ಇಬ್ಬರು ಯುವಕರು ಶಾಸ್ತ್ರೋಕ್ತವಾಗಿ ವಿಧಿವಿಧಾನದಂತೆ ತಪ್ಪು ಕಾಣಿಕೆ ನಡೆಯಿತು ಎಂದು ಮೂಲಗಳು ತಿಳಿಸಿವೆ.


ಶಾಸಕರು ಪಲ್ಲಕ್ಕಿ ಹೊತ್ತು ಸಾಗಿದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಹಿರಿಯರು ಹಾಗೂ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯು ನ.22ರ ರಾತ್ರಿ ಗಂಟೆ 10 ಕ್ಕೆ ದೇವಸ್ಥಾನದಲ್ಲಿ ತುರ್ತು ಸಭೆ ನಡೆಸಿತು. ಸಭೆಯಲ್ಲಿ ತೀರ್ಮಾನಿಸಿದಂತೆ ಶೂದ್ರನಿಂದ ಪಲ್ಲಕ್ಕಿ ಹೊರಿಸಲು ಕಾರಣರಾದ ಇಬ್ಬರು ಜಿ.ಎಸ್.ಬಿ ಯುವಕರನ್ನು ಕಾಶೀಮಠದ ಸ್ವಾಮಿಗಳ ಬಳಿಗೆ ಮಾರನೇ ದಿನ ಮುಂಜಾನೆ ಕರೆದೊಯ್ದರು. ಅಲ್ಲಿ ಸ್ವಾಮಿಗಳು ಕೆಲವೊಂದು ಪ್ರಾಥಮಿಕ ಪರಿಹಾರ ಕಾರ್ಯವನ್ನು ಸೂಚಿಸಿದರು. ಶುದ್ಧೀಕರಣ ಶಾಸ್ತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಕಾಶೀಮಠದಿಂದ ಸೂಚನೆ ಬಂದ ನಂತರವೇ ಶುದ್ಧೀಕರಣ ನಡೆಸಲು ತೀರ್ಮಾನಿಸಲಾಗಿದೆಯೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.


ಲಾಯಿಲ ವೆಂಕಟರಮಣ ದೇವಸ್ಥಾನದ ದೀಪೋತ್ಸವದ ನಿಮಿತ್ತ ರಾತ್ರಿ ಪೇಟೆ ಸವಾರಿ ಪಲ್ಲಕ್ಕಿ ಉತ್ಸವವು ಬೆಳ್ತಂಗಡಿ ನಗರದ ಮಧ್ಯ ಭಾಗ ತಲುಪುತ್ತಿದ್ದಂತೆ ರಾತ್ರಿ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಊರಿಗೆ ತೆರಳುತ್ತಿದ್ದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾರವರು ತಮ್ಮ ಕಾರಿನಿಂದಿಳಿದು ದೇವರ ಪಲ್ಲಕ್ಕಿ ಕಡೆಗೆ ತೆರಳಿ ಕೈ ಮುಗಿದು ಪ್ರಸಾದವನ್ನು ಸ್ವೀಕರಿಸಿ ತದನಂತರ ದೇವರ ಪಲ್ಲಕ್ಕಿಗೆ ಹೆಗಲನ್ನು ಕೊಟ್ಟು ತುಸು ದೂರದವರೆಗೆ ಪಲ್ಲಕ್ಕಿ ಹೊತ್ತು ನಡೆದಿದ್ದರು.


ಇಲ್ಲಿ ಪ್ರಶ್ನೆ ಏನೆಂದರೆ ದಿನವಿಡೀ ಊರೂರು ಸುತ್ತುತ್ತಾ ತನ್ನ ಸರಕಾರಿ ಕಾರ್ಯಕ್ರಮಗಳ ಜೊತೆಗೆ ಮದುವೆ,ಗೃಹ ಪ್ರವೇಶ, ಮರಣ,ಸಾವು,ಶವಸಂಸ್ಕಾರ, ತಿಥಿಯೂಟ ಮೊದಲಾದ ಕಾರ್ಯಗಳಲ್ಲೂ ಭಾಗವಹಿಸಿ ಮನೆಕಡೆಗೆ ತೆರಳುತ್ತಿದ್ದ ವ್ಯಕ್ತಿಯು ಎಲ್ಲಾ ಧಾರ್ಮಿಕ ನಿಯಮಗಳನ್ನು ಗಾಳಿಗೆ ತೂರಿ ದೇವರ ಪಲ್ಲಕ್ಕಿ ಬಳಿ ತೆರಳಿ ಪ್ರಸಾದ ಸ್ವೀಕರಿಸಿದ್ದು ಮೊದಲ ತಪ್ಪು, ದೇವರ ಪಲ್ಲಕ್ಕಿ ಹೊತ್ತಿದ್ದು ಎರಡನೇ ಘೋರ ಅಪರಾಧ. ಹಿಂದೂ ಧರ್ಮ ಮತ್ತು ಧಾರ್ಮಿಕತೆ ಬಗ್ಗೆ ಮಾತನಾಡುವವರಿಗೆ ದೇವಾಲಯಕ್ಕೆ ಹೇಗೆ ಹೋಗಬೇಕು, ದೇವರ ಪ್ರಸಾದವನ್ನು ಹೇಗೆ ಸ್ವೀಕರಿಸಬೇಕು, ಪಲ್ಲಕ್ಕಿ ಹೊರುವ ಮೊದಲು ತಾನು ಹೇಗಿರಬೇಕು ಎಂಬ ಶುದ್ಧಾಚಾರದ ಕನಿಷ್ಠ ಜ್ಞಾನವೂ ಕೂಡಾ ಇಲ್ಲದಾಯಿತೇ? ಇಷ್ಟೆಲ್ಲಾ ಧಾರ್ಮಿಕ ನಿಯಮಗಳನ್ನು ಗಾಳಿಗೆ ತೂರಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಶಾಸಕರಾದ ಹರೀಶ್ ಪೂಂಜಾರವರು ವೆಂಕಟರಮಣ ದೇವರಲ್ಲಿ ತಪ್ಪು ಕಾಣಿಕೆ ಮೂಲಕ ಪ್ರಾಯಶ್ಚಿತ್ತ ಮಾಡಿ ಹಿಂದುಗಳಲ್ಲಿ ಈ ಬಗ್ಗೆ ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು ಮುಂದೆ ಈ ರೀತಿಯಾಗದಂತೆ ನಡೆದುಕೊಳ್ಳುತ್ತೇನೆಂದು ಜನರಿಗೆ ಮಾತನ್ನು ಕೊಡಬೇಕು ಎಂಬುದು ಹಿಂದೂ ಬಾಂಧವರು ಆಗ್ರಹಿಸಿದ್ದರು.


ಇದೀಗ ಶಾಸಕರಿಗೆ ಪಲ್ಲಕ್ಕಿ ಹೊರಲು ಅವಕಾಶ ಮಾಡಿಕೊಟ್ಟ ಇಬ್ಬರು ಜಿಎಸ್ ಬಿ ಯುವಕರು ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಿದ್ದಾರೆ. ಆದರೆ ಶಾಸಕ ಹರೀಶ್ ಪೂಂಜಾ ಅವರು ಯಾವಾಗ ಕ್ಷಮೆಯಾಚಿಸುತ್ತಾರೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

Join Whatsapp
Exit mobile version