Home ಟಾಪ್ ಸುದ್ದಿಗಳು ನ್ಯಾಯಾಲಯದ ಆದೇಶದ ಬಳಿಕ ಕೊನೆಗೂ ಏಮ್ಸ್ ಗೆ ಅತೀಕುರ್ರಹ್ಮಾನ್ ದಾಖಲು

ನ್ಯಾಯಾಲಯದ ಆದೇಶದ ಬಳಿಕ ಕೊನೆಗೂ ಏಮ್ಸ್ ಗೆ ಅತೀಕುರ್ರಹ್ಮಾನ್ ದಾಖಲು

ನವದೆಹಲಿ: ಕಳೆದ ವರ್ಷ ಕೇರಳ ಪತ್ರಕರ್ತ ಸಿದ್ದಿಕ್ ಕಾಪ್ಪನ್ ರೊಂದಿಗೆ ಯುಎಪಿಎ ಕಾಯ್ದೆಯಡಿ ಬಂಧಿಸಲ್ಪಟ್ಟ ಉತ್ತರ ಪ್ರದೇಶದ ನಿವಾಸಿ, ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ-ಏಮ್ಸ್ ಗೆ ದಾಖಲಿಸಲಾಗಿದೆ ಎಂದು ಅವರ ಕುಟುಂಬ ಮತ್ತು ವಕೀಲರು ಬುಧವಾರ ಬೆಳಿಗ್ಗೆ ತಿಳಿಸಿದ್ದಾರೆ.

27 ವರ್ಷ ಪ್ರಾಯದ ಅತೀಕುರ್ರಹ್ಮಾನ್ ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಕಳೆದ ತಿಂಗಳು, ರಹ್ಮಾನ್ ಅವರನ್ನು ಏಮ್ಸ್ ಗೆ ಸ್ಥಳಾಂತರಿಸಲು ನ್ಯಾಯಾಲಯ ಆದೇಶಿಸಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ, ನವೆಂಬರ್ 18 ರಂದು ಅಲಹಾಬಾದ್ ಹೈಕೋರ್ಟ್ ಗೆ ರಹ್ಮಾನ್ ಅವರ ಚಿಕ್ಕಪ್ಪ ಸೆಖಾವತ್ ಅವರು ತುರ್ತು ಮನವಿಯನ್ನು ಸಲ್ಲಿಸಿದ್ದರು.

ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಪೊಲೀಸರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಹ್ಮಾನ್ ಅವರನ್ನು ತಕ್ಷಣ ಏಮ್ಸ್ ಗೆ ಕರೆದೊಯ್ಯಬೇಕು ಎಂದು ಸೂಚಿಸಿದೆ ಎಂದು ಸೆಖಾವತ್ ಮಾಹಿತಿ ನೀಡಿದರು.
ರಹ್ಮಾನ್ ಅವರನ್ನು ತಕ್ಷಣ ಏಮ್ಸ್ ಗೆ ಸ್ಥಳಾಂತರಿಸುವಂತೆ ಅಲಹಾಬಾದ್ ಹೈಕೋರ್ಟ್ ನಲ್ಲಿ ತುರ್ತು ಮನವಿ ಸಲ್ಲಿಸಿದ್ದೆ’ ಎಂದು ಸೆಖಾವತ್ ಮಾಧ್ಯಮಕ್ಕೆ ತಿಳಿಸಿದರು.

” ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸದಿದ್ದರೆ ಆತ ಸಾಯಬಹುದು ಎಂದು ನಾನು ಹೇಳಿದ್ದೆ. ನ್ಯಾಯಾಧೀಶರು ನಮ್ಮ ಪರವಾಗಿ ಆದೇಶ ನೀಡಿದರು. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಜೈಲಿನ ಅಧಿಕಾರಿಗಳಿಂದ ನನಗೆ ಕರೆ ಬಂತು, ಅವರು ಏಮ್ಸ್ ಗೆ ಹೊರಡಲು ಕಾರಿನ ಹತ್ತುತ್ತಿದ್ದಾರೆ ಮತ್ತು ಬೆಳಿಗ್ಗೆ 11 ಗಂಟೆಯ ವೇಳೆಗೆ ಅಲ್ಲಿಗೆ ತಲುಪುತ್ತಾರೆ ಎಂದು ಸೇಖಾವತ್ ತಿಳಿಸಿದರು.

ನಾಲ್ವರು ಮೇಲ್ಜಾತಿಯ ಪುರುಷರು ಅತ್ಯಾಚಾರಗೈದು ಕೊಲೆಗೈದ ಹತ್ರಾಸ್ ನ ದಲಿತ ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವನ ಹೇಳಲು ಹತ್ರಾಸ್ ಗೆ ತೆರಳುತ್ತಿದ್ದಾಗ ಅಕ್ಟೋಬರ್ 2020 ರಲ್ಲಿ, ಉತ್ತರ ಪ್ರದೇಶ ಪೊಲೀಸರು ಪತ್ರಕರ್ತ ಕಾಪ್ಪನ್ ರನ್ನು ಬಂಧಿಸಿದ್ದರು. ಕಾಪ್ಪನ್ ಅವರೊಂದಿಗೆ ಇದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯ ರೆಹ್ಮಾನ್ ಅವರನ್ನು ಕೂಡ ಬಂಧಿಸಿದ್ದರು.

ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸಲು ರಹ್ಮಾನ್ ಮತ್ತು ಕಾಪ್ಪನ್ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶ ಪೊಲೀಸರು ಅವರ ವಿರುದ್ಧ ಯುಎಪಿಎ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ರಹ್ಮಾನ್ ಅವರನ್ನು ಮಥುರಾ ಜೈಲಿಗೆ ಕಳುಹಿಸಲಾಗಿತ್ತು.

ರೆಹ್ಮಾನ್ ಆರ್ಟಿಕ್ ರೆಗರ್ಜಿಟೇಶನ್ ಎಂಬ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದಾರೆ. ಅವರನ್ನು ಪೊಲೀಸರು ಬಂಧಿಸುವ ಮೊದಲೇ ರಹ್ಮಾನ್ ಗೆ ಹೃದಯ ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು.

Join Whatsapp
Exit mobile version