Home ಕರಾವಳಿ ಮಂಗಳೂರು: ಉಳಾಯಿಬೆಟ್ಟು ಎಂಟರ ಹರೆಯದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ; ನಾಲ್ವರು ಕಾರ್ಮಿಕರು ಅರೆಸ್ಟ್!

ಮಂಗಳೂರು: ಉಳಾಯಿಬೆಟ್ಟು ಎಂಟರ ಹರೆಯದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ; ನಾಲ್ವರು ಕಾರ್ಮಿಕರು ಅರೆಸ್ಟ್!

ಮಂಗಳೂರು: ಮಂಗಳೂರು ಹೊರಹೊಲಯದ ಉಳಾಯಿಬೆಟ್ಟು ಪರಾಯಿ ಎಂಬಲ್ಲಿನ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಭಾರತ ಮೂಲದ ನಾಲ್ವರು ಕಾರ್ಮಿಕರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರವನ್ನೇ ಬೆಚ್ಚಿಬೀಳಿಸಿದ ಉಳಾಯಿಬೆಟ್ಟು ಪರಾರಿ ಅಪ್ರಾಪ್ತೆ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಜಾಯ್ ಸಿಂಗ್ ಯಾನೆ ಜಾಯಿಬಾನ್, ಮುಖೇಶ್ ಸಿಂಗ್, ಮನೀಶ್ ತಿಕ್ರಿ, ಮುನೀಮ್ ಸಿಂಗ್ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕ ದಂಪತಿಯ ಎಂಟರ ಹರೆಯ ಬಾಲಕಿಯನ್ನು ತನ್ನ ಸಹೋದರರೊಂದಿಗೆ ಆಟವಾಡುತ್ತಿದ್ದ ವೇಳೆ ದಿನಾಂಕ 21.11.2021 ರಂದು ಪುಸಲಾಯಿಸಿದ ಆರೋಪಿಗಳು ರಾಜ್ ಟೈಲ್ಸ್ ಫ್ಯಾಕ್ಟರಿಯ ಬಳಿಯಿರುವ ತಮ್ಮ ವಾಸಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ ನಂತರ ಕತ್ತು ಹಿಸುಕಿ ಕೊಲೆ ನಡೆಸಿರುವುದಾಗಿ ವಿಚಾರಣೆಯ ವೇಳೆ ಬಾಯಿ ಬಿಟ್ಟಿರುವುದಾಗಿ ತಿಳಿದು ಬಂದಿದೆ.

ಬಂಧಿತ ಆರೋಪಿಗಳನ್ನು ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ

ಜಾರ್ಖಂಡ್ ಮೂಲದ ದಂಪತಿಗೆ ನಾಲ್ವರು ಮಕ್ಕಳಿದ್ದು, ಸುಮಾರು 2 ವರ್ಷಗಳಿಂದ ಈ ದಂಪತಿ ರಾಜ್ ಟೈಲ್ಸ್  ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿದೆ.

ನ.21ರಂದು ಮಧ್ಯಾಹ್ನ ದಂಪತಿಯ ನಾಲ್ಕು ಮಕ್ಕಳು ಫ್ಯಾಕ್ಟರಿ ಪಕ್ಕದಲ್ಲೇ ಆಟವಾಡುತ್ತಿತ್ತು.ಆದರೆ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಮೂರು ಮಕ್ಕಳು ಮಾತ್ರ ಗುಡಿಸಲಿಗೆ ಹಿಂದಿರುಗಿದೆ.  ಮಕ್ಕಳ ಪೋಷಕರು ಅಕ್ಕಪಕ್ಕದವರನ್ನು ವಿಚಾರಿಸಿದಾಗ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಮಗು ಸಿಗಲಿಲ್ಲ. ವಿಷಯ ಎಲ್ಲಾ ಕಡೆ ಹರಿದಾಡಿದ್ದು, ಸುತ್ತಮುತ್ತಲ ಎಲ್ಲಾ ನಿವಾಸಿಗಳು ಶೋಧ ಕಾರ್ಯದಲ್ಲಿ ತೊಡಗಿದರು. ಸಂಜೆ 6 ಗಂಟೆ ಸುಮಾರಿಗೆ ಸ್ಥಳೀಯ ನಿವಾಸಿ ವಿಶ್ವನಾಥ್ ಎಂಬವರಿಗೆ ಮಗುವಿನ ಮೃತದೇಹ  ತೋಡಿನ ಒಳಗಡೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಮಗುವನ್ನು ಅಲ್ಲಿಂದ ಮೇಲಕ್ಕೆತ್ತಿ ಪರಿಶೀಲಿಸಿದಾಗ ಬಾಲಕಿ ಮೃತಪಟ್ಟಿರುವುದು ಕಂಡುಬಂದಿತ್ತು.

ವಿಷಯ ತಿಳಿದ ತಕ್ಷಣ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು. ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ  ಪ್ರಕರಣದ ಗಂಭೀರತೆಯನ್ನು ಅರಿತು ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ  ತಂಡಗಳನ್ನು ರಚಿಸಿದ್ದರು.

ಈ ತಂಡ  ಸಿಸಿಟಿವಿ ದೃಶ್ಯಾವಳಿ, ಸಿಡಿಆರ್ ವಿಶ್ಲೇಷಣೆ, ಪ್ರತ್ಯಕ್ಷ ಸಾಕ್ಷಿ, ಸಾಂದರ್ಭಿಕ ಸಾಕ್ಷಿಗಳನ್ನು ಕಲೆಹಾಕಿ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಮೊದಲೇ ಯೋಜನೆ ರೂಪಿಸಿದ್ದ ಆರೋಪಿಗಳು

ಆರೋಪಿ ಮನೀಶ್ ತಿರ್ಕಿ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕಳೆದ 11 ತಿಂಗಳಿಂದ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಜಯಬನ್ ಮತ್ತು ಮುಖೇಶ್ ಸಿಂಗ್ ಇದೇ ಫ್ಯಾಕ್ಟರಿಯಲ್ಲಿ ಕಳೆದ ಮೂರು ತಿಂಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು. ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದು, ಕೃತ್ಯ ನಡೆದ ಹಿಂದಿನ ದಿನ ಮನೀಶ್ ತಿರ್ಕಿಯನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದಾನೆ.

ಜಯಬನ್ ಮತ್ತು ಮನೀಶ್ ತಿರ್ಕಿ ಹೆಚ್ಚಾಗಿ ಒಂದೇ ಕೊಠಡಿಯಲ್ಲಿ ವಾಸ ಮಾಡುತ್ತಿದ್ದರು. ಇವರಿಬ್ಬರೂ ಮೃತ ಬಾಲಕಿಯನ್ನು ಈ ಹಿಂದೆ ಅನೇಕ ಬಾರಿ ರೂಮಿಗೆ ಬರಮಾಡಿಕೊಂಡು ಹೆಚ್ಚಿನ ಸಲುಗೆಯಿಂದ ಇದ್ದರು. ಬಾಲಕಿಗೆ ಚಾಕಲೇಟ್, ಚಿಕ್ಕಿ ನೀಡಿ ಬಾಲಕಿಯ ಮೈಕೈ ಮುಟ್ಟುವುದು, ಬಾಲಕಿಯ ಹಿಂಬದಿಯಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಕೃತ್ಯ ನಡೆದ ನಾಲ್ಕೈದು ದಿನಗಳ ಹಿಂದೆ ಆರೋಪಿಗಳಾದ ಜಯಬನ್ ಅಲಿಯಾಸ್ ಜೈ ಸಿಂಗ್, ಮುಖೇಶ್ ಸಿಂಗ್, ಮನೀಶ್ ತಿರ್ಕಿ ಅವರು ಕೊಠಡಿಯಲ್ಲಿ ಮದ್ಯಪಾನ ಮಾಡುತ್ತಾ ಮಾತುಕತೆಯಲ್ಲಿ ತೊಡಗಿದ್ದಾಗ, ಜಯಬನ್ ಮತ್ತು ಮನೀಶ್ ತಿರ್ಕಿ, ಕುಡಿತ ಮತ್ತಿನಲ್ಲಿ ಬಾಲಕಿಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಆಗ ಮುಖೇಶ್ ಸಿಂಗ್ ಮಧ್ಯಬಾಯಿ ಹಾಕಿ ‘ಅವಕಾಶ ಸಿಕ್ಕಿದರೆ ನನಗೂ ಒಂದು ಚಾನ್ಸ್ ನೀಡಿ’ ಎಂದು ಕೇಳುತ್ತಾನೆ. ಆಗ ಇನ್ನಿಬ್ಬರು, ಭಾನುವಾರ ಇಲ್ಲಿ ಹೆಚ್ಚಿನ ಜನ ಇರುವುದಿಲ್ಲ. ಕಾರ್ಮಿಕರು ಕೂಡ ಇರುವುದಿಲ್ಲ. ಬಾಲಕಿಯ ತಂದೆ-ತಾಯಿ  ಕೂಡ ಮದ್ಯದ ನಶೆಯಲ್ಲಿರುತ್ತಾರೆ, ಭಾನುವಾರ ನೋಡೋಣ ಎಂದು ಹೇಳಿದ್ದರು.

ಮುನೀಮ್ ಸಿಂಗ್ ಶನಿವಾರ ಮುಖೇಶ್ ಸಿಂಗ್ ಮನೆಗೆ ಬಂದಾಗ ಬಾಲಕಿಯ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆ ಮಾಡಿ ನನಗೂ ಒಂದು ಚಾನ್ಸ್ ಕೊಡುವಂತೆ ಕೇಳುತ್ತಾನೆ.

ನ.21ರಂದು ಮಧ್ಯಾಹ್ನ 1.10ರ ಸುಮಾರಿಗೆ ಬಾಲಕಿಯು ತನ್ನ ಸಹೋದರ, ಸಹೋದರಿಯರೊಂದಿಗೆ ಫ್ಯಾಕ್ಟರಿಯ ಕಂಪೌಂಡಿನ ಒಳಗಡೆ ಇರುವ ನೀರಿನ ಟ್ಯಾಂಕ್ ಬಳಿ ಆಟವಾಡುತ್ತಿದ್ದಾಗ ಜಯಬನ್ ಅಲಿಯಾಸ್ ಜೈ ಸಿಂಗ್ ಬಾಲಕಿಯ ಬಾಯಿಯನ್ನು ಕೈಯಿಂದ ಮುಚ್ಚಿ ಆಕೆಯನ್ನು ಎತ್ತಿಕೊಂಡು ರೂಮಿನೊಳಗೆ ಹೋಗುತ್ತಾನೆ. ನಂತರ ಮುಖೇಶ್ ಸಿಂಗ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಾನೆ. ಬಳಿಕ ಮನೀಶ್ ತಿರ್ಕಿ ಲೈಂಗಿಕ ಕ್ರೌರ್ಯವೆಸಗುತ್ತಾನೆ. ಹೀಗೆ ಒಬ್ಬರ ನಂತರ ಮತ್ತೊಬ್ಬರು ಲೈಂಗಿಕ ದೌರ್ಜನ್ಯವೆಸಗುತ್ತಾರೆ. ಈ ವೇಳೆ ಬಾಲಕಿ ತೀವ್ರ ರಕ್ತಸ್ರಾವದಿಂದ ಮತ್ತು ನೋವಿನಿಂದ ಬಳಲಿ ಕಿರುಚಿದ್ದು, ನಂತರ ಜಯಬನ್ ಅಲಿಯಾಸ್ ಜೈ ಸಿಂಗ್ ಬಾಲಕಿಯ ಕತ್ತು ಹಿಸುಕಿ ಸಾಯಿಸುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಒಬ್ಬರ ನಂತರ ಒಬ್ಬರು ಲೈಂಗಿಕ ದೌರ್ಜನ್ಯ ನಡೆಸುವಾಗ ಉಳಿದ ಆರೋಪಿಗಳು ಯಾರಾದರೂ ನೋಡುತ್ತಾರೆಯೇ ಎಂದು ಕಾಯುತ್ತಿರುತ್ತಾರೆ. ಬಳಿಕ ಜಯಬನ್ ಮತ್ತು ಮುನೀಮ್ ಸಿಂಗ್ ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮೃತ ಬಾಲಕಿಯನ್ನು ತೋಡಿನ ಒಳಗಡೆ ಬಿಸಾಡುತ್ತಾರೆ.

ಘಟನೆಯ ನಂತರ ಆರೋಪಿಗಳು ಈ ವಿಷಯವನ್ನು ಯಾರಿಗೂ ಹೇಳಬೇಡಿ ಯಾರೂ ನೋಡಿಲ್ಲ, ಮಾತ್ರವಲ್ಲ ಈ ಸ್ಥಳದಲ್ಲಿ ಸಿಸಿಟಿವಿ ಇಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ಮುಖೇಶ್ ಸಿಂಗ್ ಮತ್ತು ಮುನೀಮ್ ಸಿಂಗ್ ಪುತ್ತೂರಿಗೆ ಹೋಗುವುದಾಗಿ ಹೇಳಿ ಹೋಗುತ್ತಾರೆ. ಜಯಬನ್ ಮತ್ತು ಮನೀಶ್ ತಿರ್ಕಿ ಫ್ಯಾಕ್ಟರಿಯಲ್ಲೇ ಉಳಿದುಕೊಳ್ಳುತ್ತಾರೆ. ಯಾರಿಗೂ ಸಂಶಯ ಬಾರದ ರೀತಿಯಲ್ಲಿ ನಡೆದುಕೊಳ್ಳಲು ತೀರ್ಮಾನಿಸುತ್ತಾರೆ.

ಬಾಲಕಿ ಕಾಣೆಯಾದ ವಿಷಯ ಬೆಳಕಿಗೆ ಬಂದ ಬಳಿಕ ಸಾರ್ವಜನಿಕರು ಹುಡುಕಾಡಿದಾಗ ಜಯಬನ್, ಮನೀಶ್ ತಿರ್ಕಿ ಕೂಡ ಹುಡುಕುವಂತೆ ನಾಟಕವಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಆರೋಪಿಗಳನ್ನು ಮೂರೇ ದಿನಗಳೊಳಗೆ ಬಂಧಿಸಿದ ಪೊಲೀಸರ ಕಾರ್ಯಕ್ಕೂ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Join Whatsapp
Exit mobile version