ಮಂಗಳೂರು: ದ.ಕ.ಜಿಲ್ಲಾಡಳಿತವು ಇತ್ತೀಚೆಗೆ ಬಿಡುಗಡೆ ಮಾಡಿದ ಮತದಾರರ ಪಟ್ಟಿಯಿಂದ ಹೆಸರು ಕಣ್ಮರೆ ಪ್ರಕರಣದ ಹಿಂದೆ ಬಿಎಲ್’ಒ ಮತ್ತು ಅಂಚೆ ಇಲಾಖೆಯು ಶಾಮೀಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ.
ನಗರದ ಜ್ಯೋತಿ ಬಳಿಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ , ಜಿಲ್ಲೆಯ ಮತದಾರರ ಪಟ್ಟಿಯಿಂದ ಅನೇಕ ಮಂದಿಯ ಹೆಸರು ಡಿಲೀಟ್ ಆಗಿದೆ. ಉದ್ದೇಶಪೂರ್ವಕವಾಗಿ ನಡೆಸಲಾದ ಈ ಕೃತ್ಯದಲ್ಲಿ ಬಿಎಲ್’ಒ ಮತ್ತು ಅಂಚೆ ಇಲಾಖೆಯವರು ಕೂಡ ಶಾಮೀಲಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಈಶ್ವರ್ರಾಜ್ ಮಾತನಾಡಿ, ನಗರ ಹೊರವಲಯದ ಅರ್ಕುಳ ಗ್ರಾಮದ ಮೇರ್ಲಪದವಿನಲ್ಲಿ ಅಂಚೆ ಇಲಾಖೆಯವರು ಶಾಮಿಲಾಗಿ ನಿರ್ದಿಷ್ಟ ಮತದಾರರ ಪಟ್ಟಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿದ್ದಾರೆ. ನಗರದ ಮಂಗಳಾದೇವಿ ವಾರ್ಡ್ ಸಮಿತಿಯಲ್ಲಿ ತಾನು ಸದಸ್ಯನಾಗಿರಬಾರದು ಎಂಬ ಏಕೈಕ ಕಾರಣಕ್ಕೆ ತನ್ನ ಹೆಸರನ್ನೇ ಪಟ್ಟಿಯಿಂದ ಕಿತ್ತು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಸಂಚಾಲಕ ವೆಂಕಟೇಶ್ ಬಾಳಿಗಾ, ಮಹಿಳಾ ಘಟಕದ ಅಧ್ಯಕ್ಷೆ ಬೆನೆಟ್ ನವಿತಾ ಮೊರಾಸ್, ಮುಖಂಡ ಸ್ಟೀಫನ್ ಪಿಂಟೊ, ಆಮ್ ಆದ್ಮಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಝ್ಫರ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು.