ಬೆಂಗಳೂರು: ರಾಜ್ಯದಲ್ಲಿ ಭಿಕ್ಷಾಟನೆ ನಿರ್ಮೂಲನೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ನಿರಾಶ್ರಿತರ ಪರಿಹಾರ ಕೇಂದ್ರಗಳ ಅಧೀಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ಬಸವರಾಜ್ ನಾಯ್ಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಕೇಂದ್ರ ಪರಿಹಾರ ಸಮಿತಿಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 14 ಜಿಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳ ಅಧೀಕ್ಷಕರ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರ ಪ್ರದೇಶಗಳ ಪ್ರಮುಖ ರಸ್ತೆಗಳು ಹಾಗೂ ಜನದಟ್ಟಣೆ ಇರುವ ಸಂಚಾರಿ ಸಿಗ್ನಲ್’ಗಳಲ್ಲಿ ಮಕ್ಕಳನ್ನು ಹೊತ್ತ ಮಹಿಳೆಯರು ಹಾಗೂ ಪುರುಷರು ಮತ್ತು ಮಂಗಳಮುಖಿಯರು ಭಿಕ್ಷಾಟನೆ ಮಾಡುವುದು ದಿನೇ, ದಿನೇ ಹೆಚ್ಚುತ್ತಿರುವುದು ಆತಂಕದ ಸಂಗತಿ ಎಂದು ಅವರು ಹೇಳಿದರು.
ಭಿಕ್ಷಾಟನೆ ನಿರ್ಮೂಲನೆ ಕಾಯಿದೆ ಕುರಿತು ನಿರಂತರವಾಗಿ ಗಸ್ತು ಹೆಚ್ಚಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಎಂ.ಬಸವರಾಜ್ ನಾಯ್ಕ್ ಹೇಳಿದ್ದಾರೆ.