Home ಟಾಪ್ ಸುದ್ದಿಗಳು ಅಲ್ಪಸಂಖ್ಯಾತರು ಹಿಂದೆಯೂ ಜೆಡಿಎಸ್ ನಂಬಿಲ್ಲ, ಮುಂದೆಯೂ ನಂಬಲ್ಲ: ಸಿದ್ದರಾಮಯ್ಯ

ಅಲ್ಪಸಂಖ್ಯಾತರು ಹಿಂದೆಯೂ ಜೆಡಿಎಸ್ ನಂಬಿಲ್ಲ, ಮುಂದೆಯೂ ನಂಬಲ್ಲ: ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ ನ ಪಕ್ಕದ ಕ್ಷೇತ್ರದವರು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಬಿಜೆಪಿ ಸೋತಿದೆ. ಹಾನಗಲ್ ನಲ್ಲಿ ಪ್ರಚಾರದ ವೇಳೆ ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಮಣ್ಣಾಗುತ್ತೇನೆ, ನಾನು ಅಕ್ಕಿಆಲೂರಿನ ಅಳಿಯ ಎಂದೆಲ್ಲಾ ಭಾವನಾತ್ಮಕವಾಗಿ ಮಾತನಾಡಿದರೂ ಕೂಡ ಜನರು ಅವರ ಮಾತಿಗೆ ಮರುಳಾಗದೆ ನಮ್ಮ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.


ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಮತ್ತು ಅವರ ಮಗ ಎರಡೂ ಕಡೆಗಳಲ್ಲಿ ಕ್ರಿಯಾಶೀಲರಾಗಿ ಪ್ರಚಾರ ಮಾಡಿದರು. ಮುಖ್ಯಮಂತ್ರಿಗಳು, ಸಚಿವರು ಚುನಾವಣೆ ನಡೆಯುವ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದರು, ಇಷ್ಟೆಲ್ಲದರ ಹೊರತಾಗಿಯೂ ಜನ ಬಿಜೆಪಿಗೆ ಮತ ನೀಡದೆ, ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಬದಲಾವಣೆ ಬಯಸಿದ್ದಾರೆ. ಯಡಿಯೂರಪ್ಪ ಅವರೇ ಅಧಿಕಾರದಲ್ಲಿ ಇದ್ದಿದ್ದರೂ ಫಲಿತಾಂಶ ಹೀಗೆ ಇರುತ್ತಿತ್ತು. ಸಿಂದಗಿಯಲ್ಲಿ ಜೆಡಿಎಸ್ ನಿಂದ ಬಂದ ಕಾರ್ಯಕರ್ತರು ಮತ್ತು ಕಾಂಗ್ರೆಸ್ ನ ಕಾರ್ಯಕರ್ತರ ನಡುವೆ ಹೊಂದಾಣಿಕೆ ಕೊರತೆಯಾಗಿದ್ದು ಸೋಲಿಗೆ ಕಾರಣವಾಗಿರಬಹುದು ಎಂಬ ಅನುಮಾನವಿದೆ. ಈ ಬಗ್ಗೆ ಪೂರ್ಣ ಮಾಹಿತಿ ಬಂದ ನಂತರ ಗೊತ್ತಾಗುತ್ತದೆ ಎಂದು ಹೇಳಿದರು.


ರಾಜ್ಯ ಬಿಜೆಪಿ ಸರ್ಕಾರದ ಅವನತಿ ಶುರುವಾಗಿದೆ. ನರೇಂದ್ರ ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹಾಗಾಗಿ ಈ ಸರ್ಕಾರದ ಆಡಳಿತದ ವಿರುದ್ಧದ ಅಲೆ ಆರಂಭಗೊಂಡಿದೆ. ಮುಂದಿನ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಮುಂದಿನ ಬಾರಿ ಪಕ್ಷದಿಂದ ತಾನು ಮುಖ್ಯಮಂತ್ರಿ ಆಗಬೇಕು ಎಂದು ಪಕ್ಷದ ಯಾವ ನಾಯಕರು ಬೇಕಾದರೂ ಕೇಳಬಹುದು. ಅದರಲ್ಲಿ ಯಾವ ತಪ್ಪಿಲ್ಲ. ಆದರೆ ಪಕ್ಷದ ಹೆಚ್ಚಿನ ಶಾಸಕರ ಅಭಿಪ್ರಾಯ ಮತ್ತು ಹೈಕಮಾಂಡ್ ತೀರ್ಮಾನ ಅಂತಿಮವಾಗಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.


ಹಾನಗಲ್ ನಲ್ಲಿ ಜೆಡಿಎಸ್ ಪಕ್ಷ ನಾಲ್ಕಂಕಿ ಮತಗಳನ್ನು ಪಡೆಯದೆ, ಠೇವಣಿ ಕಳೆದುಕೊಂಡಿದೆ. ದೇವೇಗೌಡರು ಹತ್ತು ದಿನ ಹಾನಗಲ್ ಮತ್ತು ಸಿಂದಗಿಯಲ್ಲಿ ಪ್ರಚಾರ ಮಾಡಿದ್ದರು. ಮಾಜಿ ಪ್ರಧಾನಿಗಳು ಅವರು, ಅನುಭವ ಹೆಚ್ಚಿದೆ. ಅವರ ಪಕ್ಷದ ಸೋಲಿಗೆ ಏನು ಕಾರಣ ಎಂದು ಅವರನ್ನೇ ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಬಿಟ್ ಕಾಯಿನ್ ಪ್ರಕರಣದ ಆರೋಪಿಯಾದ ಶ್ರೀ ಕೃಷ್ಣ ಎಂಬುವವರನ್ನು ಬಂಧಿಸಲಾಗಿತ್ತು. ಆತನ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ, ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕೀಯ ನಾಯಕರ ಹೆಸರನ್ನು ಮುಖ್ಯಮಂತ್ರಿಗಳೇ ಬಹಿರಂಗಪಡಿಸಲಿ. ಅವರು ಕಾಂಗ್ರೆಸ್ ನವರಾದರೂ ಸರಿ, ಬಿಜೆಪಿ ಯವರಾದರೂ ಸರಿ. ಜನರಿಗೆ ಸತ್ಯ ಗೊತ್ತಾಗಲಿ ಎಂದು ಸವಾಲು ಹಾಕಿದರು.
ನಾನು ತನಿಖಾ ಸಂಸ್ಥೆಗೆ ಸಾಕ್ಷಿ ಕೊಡುವುದಾದರೆ ತನಿಖೆ ಯಾಕೆ ಬೇಕು? ಪ್ರಕರಣದಲ್ಲಿ ರಾಜಕೀಯ ನಾಯಕರು ಭಾಗಿಯಾದ ಬಗ್ಗೆ ನನಗೆ ಮಾಹಿತಿ ಇದೆ ಅಷ್ಟೆ. ಕಾನೂನು ಬಾಹಿರ ಕೃತ್ಯವೊಂದು ನಡೆಯದೆ ಹೋಗಿದ್ದರೆ ಬಸವರಾಜ ಬೊಮ್ಮಾಯಿ ಪ್ರಕರಣವನ್ನು ಇ.ಡಿ ಯಾಕೆ ವಹಿಸಿದ್ದು? ತನಿಖೆ ಯಾಕೆ ಮಾಡುತ್ತಿರುವುದು?ಎಂದು ಪ್ರಶ್ನಿಸಿದರು.


ಜೆಡಿಎಸ್ ನಿಂದ ಬಂದ ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮಾ ನಾಯಕ್ ಗೆದ್ದಿದ್ದಾರೆ. ನಾನು ಕೂಡ ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿ ಗೆದ್ದಿದ್ದೇನೆ. ಜೆಡಿಎಸ್ ನಿಂದ ಬಂದ ಮತ್ತು ಕಾಂಗ್ರೆಸ್ ನ ಹಳೆಯ ಕಾರ್ಯಕರ್ತರ ನಡುವೆ ಎಲ್ಲಾ ಕಡೆ ಹೊಂದಾಣಿಕೆ ಕೊರತೆ ಆಗುವುದಿಲ್ಲ, ಕೆಲವೊಂದು ಕ್ಷೇತ್ರದಲ್ಲಿ ಹೊಂದಾಣಿಕೆಯಲ್ಲಿ ಹೆಚ್ಚು ಕಡಿಮೆ ಆಗುತ್ತೆ, ಅದನ್ನು ಮುಂದೆ ಸರಿಪಡಿಸಬಹುದು. ಅಲ್ಪಸಂಖ್ಯಾತ ಬಂಧುಗಳು ಹಿಂದೆಯೂ ಜೆಡಿಎಸ್ ನ ನಂಬಿಲ್ಲ, ಮುಂದೆಯೂ ನಂಬಲ್ಲ. ಜೆಡಿಎಸ್ ಒಂದು ಅವಕಾಶವಾದಿ ಪಕ್ಷ ಎಂಬುದು ಅವರಿಗೆ ಗೊತ್ತಿದೆ ಎಂದರು.


ನವೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವಂತೆ ನಾನು ಕೂಡ ಸರ್ಕಾರವನ್ನು ಒತ್ತಾಯ ಮಾಡಿದ್ದೇನೆ. ಕಳೆದ ಮೂರು ವರ್ಷದಲ್ಲಿ ಒಂದು ಬಾರಿಯೂ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಬೇಕು ಎಂಬ ಉದ್ದೇಶದಿಂದಲೆ ಸುವರ್ಣಸೌಧ ಕಟ್ಟಿದ್ದು. ಉತ್ತರ ಕರ್ನಾಟಕದ ಬಗ್ಗೆ ಬಹಳ ಮಾತನಾಡುವ ಬಿಜೆಪಿ ಯವರು ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮನಸಿದ್ದರೆ ಬೆಳಗಾವಿಯಲ್ಲೇ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.

Join Whatsapp
Exit mobile version