ಮುಂಬೈ: ಫೆಬ್ರವರಿ 26ರಿಂದ ಮುಂಬಯಿಯ ಆಜಾದ್ ಮೈದಾನದಲ್ಲಿ ಮರಾಠಾ ಮೀಸಲಾತಿಗೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮಹಾರಾಷ್ಟ್ರದ ಸಚಿವ ಸಂಭಾಜಿ ರಾಜೆ ಹೇಳಿದ್ದಾರೆ.
ಯೋಧ ರಾಜ ಛತ್ರಪತಿ ಶಿವಾಜಿ ವಂಶಕ್ಕೆ ಸೇರಿದ ರಾಜೆ ಅವರು ಕಳೆದೊಂದು ವರುಷದಿಂದ ಮರಾಠಾ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚಿನ ಕೆಲವು ದಿನಗಳಿಂದ ರಾಜೆ ಛತ್ರಪತಿ ಅವರು ಮಹಾರಾಷ್ಟ್ರ ರಾಜ್ಯದಾದ್ಯಂತ ಹಲವರ ಜೊತೆ ಮರಾಠಾ ಮೀಸಲಾತಿಯ ಬಗ್ಗೆ ಚರ್ಚೆ ಮಾಡಿದ್ದಾರೆ.
ಮಹಾರಾಷ್ಟ್ರ ಸರಕಾರವು ಕಳೆದ ವರ್ಷ ಮರಾಠರಿಗೆ ಪ್ರವೇಶ ಮತ್ತು ಕೆಲಸದಲ್ಲಿ ನೀಡಿದ ಮೀಸಲಾತಿಯ ಕಾಯ್ದೆಯನ್ನು ಸುಪ್ರೀಂ ಕೋರ್ಟು ಅಸಾಂವಿಧಾನಿಕ ಎಂದು ಕಿತ್ತು ಹಾಕಿತ್ತು. 1992ರಲ್ಲಿ ಮಂಡಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿದ ಒಟ್ಟು ಮೀಸಲಾತಿ 50 ಶೇಕಡಾ ಮೀರಬಾರದು ಎಂಬ ನಿಯಮವನ್ನು ಸಹ ಕೋರ್ಟು ಹೇಳಿತು.