Home ಕ್ರೀಡೆ ಅಸಾಮಾನ್ಯ ಗೆಲುವಿನ ಲೆಕ್ಕಾಚಾರದಲ್ಲಿ ಮುಂಬೈ ಇಂಡಿಯನ್ಸ್..!

ಅಸಾಮಾನ್ಯ ಗೆಲುವಿನ ಲೆಕ್ಕಾಚಾರದಲ್ಲಿ ಮುಂಬೈ ಇಂಡಿಯನ್ಸ್..!

ಅಬುಧಾಬಿ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಪ್ಲೇ ಆಫ್ ಹಂತಕ್ಕೇರಲು ಪವಾಡವೇ ನಡೆಯಬೇಕಾಗಿದೆ. ಶುಕ್ರವಾರ ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಕೊನೇಯ ಲೀಗ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ.


ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈಗಾಗಲೇ ಪ್ಲೇಆಫ್ ಹಂತವನ್ನು ತಲುಪಿವೆ. ಉಳಿದ ಒಂದು ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. 14 ಪಂದ್ಯಗಳಿಂದ 14 ಅಂಕ ಗಳಿಸಿರುವ ಕೆಕೆಆರ್, +0.587 ನೆಟ್ ರನ್ ರೇಟ್ ಹೊಂದಿದೆ. 13 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ 12 ಅಂಕಗಳಿಸಿದ್ದು, – 0.048 ನೆಟ್ ರನ್ ರೇಟ್ ಹೊಂದಿದೆ. ಗುರುವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 86 ರನ್’ಗಳ ಅಂತರದಲ್ಲಿ ಭರ್ಜರಿಯಾಗಿಯೇ ಸೋಲಿಸಿರುವುದು ಕೆಕೆಆರ್ ಹಾದಿಯನ್ನು ಸುಗಮವಾಗಿಸಿದೆ. ಮತ್ತೊಂದೆಡೆ ರೋಹಿತ್ ಶರ್ಮಾ ಬಳಗದ ಪ್ಲೇಆಫ್ ಲೆಕ್ಕಾಚಾರ ಬುಡಮೇಲಾಗಿದೆ.


ಈ ಬಾರಿಯ ಐಪಿಎಲ್’ನಲ್ಲಿ ನೀರಸ ಪ್ರದರ್ಶನ ನೀಡಿರುವ ಸನ್’ರೈಸರ್ಸ್ ಹೈದರಾಬಾದ್ ಕಳೆದ ಪಂದ್ಯದಲ್ಲಿ ಆರ್’ಸಿಬಿ ವಿರುದ್ಧ ರೋಚಕ ಜಯ ದಾಖಲಿಸಿತ್ತು. ಕೊನೇಯ ಲೀಗ್ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಶಾಕ್ ನೀಡಿ ಐಪಿಎಲ್’-14ಗೆ ವಿದಾಯ ಹೇಳಲು ಎಸ್’ಆರ್’ಎಚ್ ತಾಲೀಮು ನಡೆಸಿದೆ.

ಏಕಕಾಲಕ್ಕೆ ಎರಡು ಪಂದ್ಯ :


ಶುಕ್ರವಾರ ಸಂಜೆ 7.30ಕ್ಕೆ ನಡೆಯುವ ಮತ್ತೊಂದು ಪಂದ್ಯದಲ್ಲಿ ಈಗಾಗಲೇ ಪ್ಲೇ ಆಫ್ ಹಂತಕ್ಕೇರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. 13 ಪಂದ್ಯಗಳನ್ನಾಡಿರುವ ಡೆಲ್ಲಿ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿರುವ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಂಗ್-ಬೌಲಿಂಗ್ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಮತ್ತೊಂದೆಡೆ ಎರಡನೇ ಸ್ಥಾನಕ್ಕೇರುವ ಆರ್’ಸಿಬಿ ಕನಸಿಗೆ ಎಸ್’ಆರ್’ಎಸ್ ತಂಡ ತಡೆಯೊಡ್ಡಿತ್ತು. ಆರ್’ಸಿಬಿ ಪರ ಅದ್ಭುತ ಪ್ರದರ್ಶನ ಮುಂದುವರೆಸಿರುವ ಗ್ಲೇನ್ ಮ್ತಾಕ್ಸ್’ವೆಲ್ ಟೂರ್ನಿಯಲ್ಲಿ ಐದು ಅರ್ಧಶತಕ ಗಳಿಸಿದ್ದು, ಒಟ್ಟು 447 ರನ್ ಕಲೆಹಾಕಿದ್ದಾರೆ.

Join Whatsapp
Exit mobile version