ಬೆಂಗಳೂರು: “ಕಾಂಗ್ರೆಸ್‌ನ 50 ಶಾಸಕರಿಗೆ ಬಿಜೆಪಿಯವರು 50 ಕೋಟಿ ರೂ. ಆಮಿಷ ಒಡ್ಡಿರುವುದು ನಿಜ” ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧ ಆವರಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, “ಆಪರೇಷನ್ ಕಮಲದ ಬಗ್ಗೆ ನಮ್ಮ ಶಾಸಕರ ಬಳಿ ಬಿಜೆಪಿಯವರು ಮಾತನಾಡಿದ್ದಾರೆ. ಈ ವಿಚಾರವನ್ನು ಕೆಲವರು ಬಂದು ಮುಖ್ಯಮಂತ್ರಿ ಬಳಿ ತಿಳಿಸಿದ್ದಾರೆ. ಹೀಗಾಗಿ ಈ ಸಂಗತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದ ಮುಂದೆ ಹೇಳಿದ್ದಾರೆ. ಇತರೆ ವಿಚಾರಗಳನ್ನು ನಂತರ ನಿಮಗೆ ತಿಳಿಸುತ್ತೇನೆ” ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಳೆದ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದ ಮಟ್ಟದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತ್ತು. ಇದನ್ನು ಸಹಿಸದ ಬಿಜೆಪಿಗರು, ಈ ಬಾರಿ ಹೇಗಾದರೂ ಸರಿ ಸಿದ್ದರಾಮಯ್ಯ ಸರ್ಕಾರ ಕಿತ್ತೊಗೆಯಲು 50 ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಲು ಮುಂದಾಗಿತ್ತು. ಇದಕ್ಕೆ ನಮ್ಮ ಶಾಸಕರು ಒಪ್ಪಿರಲಿಲ್ಲ. ಹೀಗಾಗಿ ಬಿಜೆಪಿಯವರು ನನ್ನ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.