Home ಕರಾವಳಿ ಮಂಗಳೂರು: ಇಬ್ಬರು ರೌಡಿ ಶೀಟರ್ ಗಳ ಮೇಲೆ ಗೂಂಡಾ ಕಾಯ್ದೆ ಜಾರಿ

ಮಂಗಳೂರು: ಇಬ್ಬರು ರೌಡಿ ಶೀಟರ್ ಗಳ ಮೇಲೆ ಗೂಂಡಾ ಕಾಯ್ದೆ ಜಾರಿ

►ಜೈಲು ಸೇರಿದ ಧೀರಜ್ ಕುಮಾರ್, ಪ್ರೀತಮ್ ಪೂಜಾರಿ

ಮಂಗಳೂರು: ನಗರ ಕಮಿಷನರೇಟ್ ವ್ಯಾಪ್ತಿಯ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಬರು ರೌಡಿ ಶೀಟರ್ ಗಳ ವಿರುದ್ಧ ಗೂಂಡಾ ಕಾಯ್ದೆ ಜಡಿದು ಜೈಲಿಗಟ್ಟಲಾಗಿದೆ.

ಪಡೀಲ್ ಅಳಪೆಯ ಎಕ್ಕೂರು ನಾಗನಕಟ್ಟೆಯ ಗಾಣದ ಕೊಟ್ಯ ನಿವಾಸಿ ಧೀರಜ್ ಕುಮಾರ್ (27) ಹಾಗೂ ಬಜಾಲ್ ಜಲ್ಲಿಗುಡ್ಡೆ ಜಯನಗರ ನಿವಾಸಿ ಪ್ರೀತಮ್ ಪೂಜಾರಿ (26) ವಿರುದ್ಧ ಗೂಂಡಾ ಆಕ್ಟ್ ಜಾರಿಗೊಳಿಸಲಾಗಿದೆ.

ಆರೋಪಿಗಳು ಕಳ್ಳಭಟ್ಟಿ, ಮಾದಕ ವಸ್ತು, ಜೂಜು, ಗೂಂಡಾಗಿರಿ, ಅನೈತಿಕ ವ್ಯವಹಾರ, ವೀಡಿಯೋ, ಆಡಿಯೋ ಪೈರಸಿ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಇಬ್ಬರ ವಿರುದ್ಧವೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಧೀರಜ್ ವಿರುದ್ಧ 2015ರಲ್ಲಿ ದರೋಡೆಗೆ ಸಜ್ಜು, 2017ರಲ್ಲಿ ಕೊಲೆಯತ್ನ, 2018ರಲ್ಲಿ ಅಪಹರಣ, ಕೊಲೆಗೆ ಯತ್ನ, 2019ರಲ್ಲಿ ಕೊಲೆಗೆ ಯತ್ನ, ಗಂಭೀರ ಗಾಯಗೊಳಿಸಿದ ಸಂಬಂಧ ಮೂರು ಪ್ರಕರಣ, 2020ರಲ್ಲಿ ಅಪರಾಧಕ್ಕೆ ಒಳಸಂಚು, 2021ರಲ್ಲಿ ಹಲ್ಲೆ, 2022ರಲ್ಲಿ ದರೋಡೆ, ಹಲ್ಲೆ ಸೇರಿದಂತೆ ಒಟ್ಟು 12ಕ್ಕೂ ಅಧಿಕ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಈತ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದು, ಈತನನ್ನು ಗರಿಷ್ಠ ಅವಧಿಗೆ ಕಾರಾಗೃಹದಲ್ಲಿ ಇಡುವಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ಎಚ್.ಬಜಂತ್ರಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು. ಅದರಂತೆ ಆರೋಪಿಯ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಿ ಜೈಲಿಗಟ್ಟಲಾಗಿದೆ.

ಅದೇ ರೀತಿ ಪ್ರೀತಂ ಪೂಜಾರಿ ವಿರುದ್ಧ 2016ರಲ್ಲಿ ಎರಡು ಜೀವ ಬೆದರಿಕೆ ಪ್ರಕರಣ, ಗಾಂಜಾ ಸೇವನೆ, 2017ರಲ್ಲಿ ಕೊಲೆಗೆಯತ್ನ,ಬೆದರಿಕೆ, 2018ರಲ್ಲಿ ಅಪಹರಣ ಬೆದರಿಕೆ, 2019ರಲ್ಲಿ ಬೆದರಿಕೆ, ಹಲ್ಲೆ, 2020ರಲ್ಲಿ 3 ಹಲ್ಲೆ, ಗಾಂಜಾ ಸೇವನೆ, ಅಕ್ರಮ ಕೂಟ ಸೇರಿ ದರೋಡೆ ಪ್ರಕರಣ, 2021ರಲ್ಲಿ ಕೊಲೆಯತ್ನ, ಗಾಂಜಾ ಸೇವನೆ, 2022ರಲ್ಲಿ ಕೊಲೆಯತ್ನ, ಗಾಂಜಾ ಸೇವನೆ ಸೇರಿದಂತೆ ಒಟ್ಟು 12 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಈತನ ವಿರುದ್ಧವೂ ಗೂಂಡಾ ಕಾಯ್ದೆ ಜಡಿಯುವಂತೆ ಬಜಂತ್ರಿಯವರು ಮನವಿ ಮಾಡಿದ್ದರು.

ಆರೋಪಿಗಳ ಹಿನ್ನೆಲೆ, ಅಪರಾಧಗಳ ಸ್ವರೂಪ ಮತ್ತಿತರ ಅಂಶಗಳನ್ನು ಗಮನಿಸಿ ಪೊಲೀಸ್ ಆಯುಕ್ತರು ಇಬ್ಬರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಜೈಲಿಗಟ್ಟಲು ಸೂಚಿಸಿದ್ದಾರೆ. ಅದರಂತೆ ಇಬ್ಬರು ರೌಡಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

Join Whatsapp
Exit mobile version