ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಮಂಗಳಗಂಗೋತ್ರಿಯ 2022- 23ನೇ ಸಾಲಿನ ಆಯವ್ಯಯ ಅಂದಾಜು ಮಂಡನೆಯಾಗಿ ಚರ್ಚೆಯ ಬಳಿಕ ಸ್ವೀಕಾರಗೊಂಡಿತು.
ಆಯವ್ಯಯದಂತೆ ಆದಾಯ 210.46 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೇತರ ವೆಚ್ಚ 220.06 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಟ್ಟು ಸ್ವೀಕೃತಿ 272.57 ಕೋಟಿ ರೂಪಾಯಿ ಆಗಿದ್ದು ಒಟ್ಟಾರೆ 64 ಲಕ್ಷ ಕೊರತೆ ಬೀಳಬಹುದು. ಕಳೆದ ಸಾಲಿನಲ್ಲಿ 2.05 ಕೋಟಿ ಕೊರತೆಯಾಗಿದ್ದು, ಅದನ್ನೂ ಭರಿಸಬೇಕಾಗಿದೆ. ಇತರ ಖರ್ಚು ವೆಚ್ಚಗಳ ಬಗೆಗೆ ಕೂಡ ಚರ್ಚೆ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಸುಪರ್ದಿಯಲ್ಲಿ 215 ಕಾಲೇಜುಗಳು ಇದ್ದು, 5 ಹೊಸದಾಗಿ ಆರಂಭವಾದವುಗಳಾಗಿವೆ. ನವೀಕರಣಕ್ಕೆ 146 ಕಾಲೇಜುಗಳು ಮನವಿ ಸಲ್ಲಿಸಿದ್ದರೆ, 28 ಕಾಲೇಜುಗಳು ವಿಸ್ತರಣೆಗೆ ಅರ್ಜಿ ಹಾಕಿವೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿವಿ ಉಪಕುಲಪತಿ ಯಡಪಡಿತ್ತಾಯ ಅವರು ಹಣಕಾಸು ಅಧಿಕಾರಿಗಳು ಹೇಳಿದ ಆಯವ್ಯಯದ ಬಗ್ಗೆ ಮಾಹಿತಿ ನೀಡಿದರು.
ಸಂತ ಅಲೋಶಿಯಸ್ ಕಾಲೇಜಿನವರು 80 ವಿದ್ಯಾರ್ಥಿಗಳ ಪರಿಮಿತಿಯೊಳಗೆ 2022-23ರಿಂದ ಬಿಸಿಎ ಪದವಿಗೆ ಹಾಗೂ ವಿಶುವಲ್ ಕಮ್ಯೂನಿಕೇಶನ್ ಬಿಎಸ್ ಸಿ ಪದವಿಗೆ ಕೋರಿದ ಮನವಿಗಳನ್ನು ಅನುಮೋದಿಸಿದ್ದಾಗಿ ಸಭೆ ನಿರ್ಣಯಿಸಿತು.
ಬ್ಯಾರಿ ಭಾಷೆಯಲ್ಲಿ ಪದವಿ, ಸರ್ಟಿಫಿಕೇಟ್ ಕೋರ್ಸ್ ನಡೆಸಲು ಅಬೂಬಕರ್ ಸಿದ್ದಿಕ್ ಸಲ್ಲಿಸಿದ ಬಗೆಗಿನ ಚರ್ಚೆಯಲ್ಲಿ ಇಂತಹ ಕೋರ್ಸುಗಳನ್ನು ಪ್ರತ್ಯೇಕ ನಡೆಸುವ ಬದಲು ಸಂಯೋಜಿತ ಅಗತ್ಯ ಎಂದು ಸರಕಾರ ಹೇಳಿದೆ. ಅದಕ್ಕೆ ತಕ್ಕಂತೆ ಸಂಯೋಜಿತ ವಿಧಾನ ಕಳುಹಿಸಲಾಗಿದೆ ಎಂದು ಉಪಕುಲಪತಿಗಳು ಹೇಳಿದರು.
ಮಂಗಳೂರು ವಿವಿ ವಲಯದಲ್ಲಿ 5 ಸ್ವಾಯತ್ತ ಕಾಲೇಜುಗಳು ಇವೆ. 8 ಖಾಯಂ ಬಾಂಧವ್ಯದವು, 6 ಒಳಬಂಧದ ಕಾಲೇಜುಗಳು ಇವೆ. 27 ಕಾಲೇಜುಗಳು ಅರ್ಜಿ ಸಲ್ಲಿಸಿಲ್ಲ ಎಂದು ಸಭೆಯಲ್ಲಿ ತಿಳಿಸಲಾಯಿತು.
ಪಿಎಚ್ ಡಿ ಮಾಡುವವರು ಹೆಚ್ಚಿನ ಕಾಲಾವಧಿ ಕೇಳಿದ್ದಾರೆ. ಇದು ಅಗತ್ಯವೇ ಎಂಬ ಚರ್ಚೆಯಲ್ಲಿ ಆ ವಿಷಯ ಸದ್ಯ ನನೆಗುದಿಗೆ ಬಿದ್ದಿದೆ. ನಿಯಮಾವಳಿ ಬದಲು ಮಾನವೀಯ ನೆಲೆಯಲ್ಲಿ ಇದು ಈಗ ಚರ್ಚೆಗೆ ಬಿದ್ದಿದೆ ಎಂದೂ ಕುಲಪತಿ ತಿಳಿಸಿದರು.