ಬೆಂಗಳೂರು: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ಕೊಲೆ ಮಾಡಿ ಅಪಘಾತದಂತೆ ಬಿಂಬಿಸಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಶಿಡ್ಲಘಟ್ಟದ ಕನ್ನಮಂಗಲ ಗ್ರಾಮದ ವೆಂಕಟೇಶ್ ಬಂಧಿತ ಆರೋಪಿ. ಕನ್ನಮಂಗಲದ ಜೆಡಿಎಸ್ ಕಾರ್ಯಕರ್ತ ಚಿಕ್ಕಆಂಜಿನಪ್ಪ ಅವರು ಕಳೆದ ಜೂ. 2ರಂದು ರಾತ್ರಿ 10ರ ವೇಳೆ ಶಿಡ್ಲಘಟ್ಟದಿಂದ ಕನ್ನಮಂಗಲಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯದ ನಾರಾಯಣದಾಸರಹಳ್ಳಿ ಗೇಟ್ ಸಮೀಪ ಅನುಮಾನಾಸ್ಪದವಾಗಿ ತಲೆಗೆ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಮೃತಪಟ್ಟಿದ್ದರು.
ಈ ಬಗ್ಗೆ ಚಿಕ್ಕಆಂಜಿನಪ್ಪ ಅವರ ಸಹೋದರ ಅಶ್ವತ್ಥಪ್ಪ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕೊಲೆ ಆರೋಪದ ದೂರು ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಚಿಕ್ಕ ಆಂಜಿನಪ್ಪ ಅವರ ಮೊಬೈಲ್ ನಂಬರ್ ಕರೆಗಳ ಜಾಡು ಹಿಡಿದು ತನಿಖೆ ಕೈಗೊಂಡಿದ್ದರು. ಕೊಲೆಯಾದ ದಿನ ಮೃತ ಆಂಜಿನಪ್ಪ ಅವರ ನಂಬರ್ ಗೆ ಕನ್ನಮಂಗಲ ಬಂಧಿತ ವೆಂಕಟೇಶ್ ಹಲವು ಬಾರಿ ಕರೆ ಮಾಡಿದ್ದು ಅನುಮಾನದ ಮೇಲೆ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯ ಬಾಯ್ಬಿಟ್ಟಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ವಿಚಾರಣೆಯಲ್ಲಿ, ತನ್ನ ಅಣ್ಣ ನಾಗೇಶ್ ಅವರ ಜೊತೆ ಚಿಕ್ಕಆಂಜಿನಪ್ಪ ಸೇರಿಕೊಂಡು ತಮ್ಮ ಎಲ್ಲ ಜಮೀನನ್ನು ಅಣ್ಣ ನಾಗೇಶ್ ಅವರ ಹೆಸರಿಗೆ ಮಾಡಿಸುತ್ತಾನೆ ಎಂದು ತಿಳಿದುಕೊಂಡು, ಇವನು ಬದುಕಿದ್ದರೆ ನನಗೆ ಜಮೀನು ಇಲ್ಲದಂತೆ ಮಾಡುತ್ತಾನೆ ಎಂದು ಆತಂಕಗೊಂಡು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ.