► ಕಾಂಗ್ರೆಸ್ ನವರು ನಮ್ಮನ್ನು ಬಸ್ ಸ್ಟಾಂಡ್ ನಲ್ಲಿ ಮೇಕಪ್ ಮಾಡಿಸಿ, ಗಿರಾಕಿ ಕರೆಯೋಕೆ ನಿಲ್ಲಿಸಿದ್ರು
ಬೆಂಗಳೂರು: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹೀಂ, ನಾನು ಸೈದ್ಧಾಂತಿಕವಾಗಿ ಹೋರಾಟ ಮಾಡಿ ಬಂದವನು. ಹಾಗಾಗಿ ಜೆಡಿಎಸ್ ಕಡೆ ಹೋಗುತ್ತಿದ್ದೇನೆ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿರುವ ಇಬ್ರಾಹೀಂ ಯುಟಿ ಖಾದರ್ ಗೆ ಕೊಟ್ಟಿರುವ ವಿರೋಧ ಪಕ್ಷದ ಉಪನಾಯಕ ಸ್ಥಾನ ಬರೀ ಚಡ್ಡಿ, ಪ್ಯಾಂಟ್ ಎಲ್ಲೋಯ್ತು ಎಂದು ಕುಟುಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರು ಈ ರಾಜ್ಯದಲ್ಲಿ 28% ಇದ್ದಾರೆ, ರಾಜ್ಯದಲ್ಲಿ 70 ವರ್ಷ ರಾಜ್ಯದಲ್ಲಿ ಯಾರಾದರೂ ಮುಸ್ಲಿಂ ವ್ಯಕ್ತಿ ಅಧ್ಯಕ್ಷರಾಗಿದ್ದಾರಾ ? ಯಾರಾದರೂ ಸಾಬ್ರಿಗೆ ಒಳ್ಳೆಯ ಖಾತೆ ನೀಡಿದ್ರಾ.? ಎಂದು ತೀಕ್ಷ್ಣವಾಗಿಯೇ ಪ್ರಶ್ನಿಸಿದರು.
ಕಾಶ್ಮೀರದಲ್ಲಿ ಯೋಧ ಅಲ್ತಾಫ್ ಹುತಾತ್ಮರಾದಾಗ ಇವರೇನಾದರೂ ಹೋದ್ರಾ.? ಹಣ ಕೊಡಲಿಲ್ಲ, ಅದನ್ನು ಕೇಳಿದ್ರಾ.? ಹಿಜಾಬ್ ವಿಚಾರದ ಬಗ್ಗೆ ಪ್ರಶ್ನೆ ಬಂದಾಗ ಇವರು ಮಾತನಾಡಿದ್ರಾ.? ಚೆನ್ನಮ್ಮ, ಇಂದಿರಾ ಗಾಂಧಿ ಅವರಿಗೆ ಅವಮಾನವಾದಾಗ ಅದನ್ನು ಪ್ರಶ್ನೆ ಮಾಡಿದ್ರಾ.? ನಮಗೆ ಸ್ಥಾನ ಕೊಡೋದು ಬೇಡಾ, ನಮ್ಮನ್ನು ಗೌರವಯುತವಾಗಿಯಾದರೂ ಕಂಡಿದ್ದಾರಾ ಎಂದು ಇಬ್ರಾಹೀಂ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುತ್ತಿದೆ. 1995ರಲ್ಲಿ ರಾಜ್ಯದಲ್ಲಿ ಒಂದು ಬೆಳವಣಿಗೆ ಆಗಿತ್ತು, ಅದೇ ರೀತಿಯ ಬೆಳವಣಿಗೆ ಈಗ ಆಗುತ್ತಿದೆ. ಕಾಂಗ್ರೆಸ್ ಪಕ್ಷ ತನ್ನ ನೆಲೆ ಕಳೆದುಕೊಳ್ಳುತ್ತಿದೆ. ಜನರ ಸಂಪರ್ಕದಲ್ಲಿ ಇಲ್ಲದವರನ್ನು ಕಾಂಗ್ರೆಸ್ ಪಕ್ಷ ಬೆಳೆಸುತ್ತಿದೆ. ಇದು ಬಸವಾದಿ ಶರಣರ ನಾಡು, ರಾಜ್ಯವನ್ನು ಉತ್ತರ ಪ್ರದೇಶ ಆಗಲು ಬಿಡುವುದಿಲ್ಲ, ಹೀಗಾಗಿ ನಾನು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಜಿ ಸಚಿವ ಹೇಳಿದರು.
ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರವನ್ನು ತಲುಪಿಸುತ್ತಿದ್ದೇನೆ. ನನ್ನ ಎಂಎಲ್ ಸಿ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಅಂಗೀಕಾರ ಮಾಡುವುದು, ಬಿಡುವುದು ಅವರಿಗೆ ಸೇರಿದ್ದು. ನನ್ನ ರಾಜೀನಾಮೆ ಪತ್ರ ಸಿದ್ದರಾಮಯ್ಯ ಅವರಿಗೂ ಕೊಡುತ್ತಿದ್ದೇನೆ. ಜೂನ್ ನಲ್ಲಿ ಬಿಜೆಪಿಗೆ ಮೆಜಾರಿಟಿ ಬರುತ್ತದೆ. ಇಂದೇ ರಾಜೀನಾಮೆ ನೀಡುತ್ತಿದ್ದೇನೆ, ರಾಹುಲ್ ಗಾಂಧಿ, ಸೋನಿಯಾ, ಡಿಕೆಶಿ, ಸಿದ್ದುಗೆ ಧನ್ಯವಾದಗಳು. ಪಕ್ಷದ ಕಾರ್ಯಕರ್ತರಿಗೂ ಧನ್ಯವಾದಗಳು ಎಂದರು.
ಜೆಡಿಎಸ್ ನಲ್ಲಿ ಸ್ಥಾನವನ್ನಲ್ಲ, ಮಾನವನ್ನು ನಿರೀಕ್ಷೆ ಮಾಡಿದ್ದೇನೆ:
ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ಪರೋಕ್ಷವಾಗಿ ಸಂದೇಶ ನೀಡಿರುವ ಸಿಎಂ ಇಬ್ರಾಹೀಂ, ನಾನು ಯಾವುದೇ ಸ್ಥಾನ ಅಪೇಕ್ಷೆ ಮಾಡುತ್ತಿಲ್ಲ, ಮಾನ ನಿರೀಕ್ಷೆ ಮಾಡಿ ಹೋಗುತ್ತೇನೆ ಎಂದಿದ್ದಾರೆ. ನನಗೆ ಯಾವುದೇ ಸ್ಥಾನ ಕೊಡೋದು, ಬಿಡೋದು ಜೆಡಿಎಸ್ ಗೆ ಬಿಟ್ಟದ್ದು, ನಾನು ಕಿಂಗ್ ಆಗೋದಕ್ಕೆ ಇಚ್ಛೆ ಇಲ್ಲ, ಕಿಂಗ್ ಮೇಕರ್ ಆಗೋಕೆ ಇಷ್ಟ ಪಡ್ತೀನಿ ಎಂದರು.
ಮುಂದೆ ಜೆಡಿಎಸ್ನಿಂದ ಎಷ್ಟು ಜನ ಮುಸ್ಲಿಮ್ ಅಭ್ಯರ್ಥಿಗಳು ಆಯ್ಕೆ ಆಗಿಬರ್ತಾರೆ ನೋಡ್ತಾ ಇರಿ ಎಂದ ಇಬ್ರಾಹೀಂ , ಕಾಂಗ್ರೆಸ್ನಲ್ಲಿ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಬಸ್ ಸ್ಟಾಂಡ್ ನಲ್ಲಿ ಮೇಕಪ್ ಮಾಡಿ ನಿಲ್ಸಿ, ಗಿರಾಕಿ ಕರೆಯೋಕೆ ನಮ್ಮನ್ನು ನಿಲ್ಲಿಸಿದ್ದರು. ಬರೀ ಒಕ್ಕಲಿಗರು, ಸಾಬ್ರು ಸೇರಿದ್ರೆ 65 ಸೀಟು ಬರುತ್ತೆ. ಲಿಂಗಾಯತರು, ಸಾಬ್ರು ಸೇರಿದ್ರೆ 120 ಸೀಟು ಬರುತ್ತೆ. ಕಾಂಗ್ರೆಸ್ ನಲ್ಲಿ ಗೊಡ್ಡೆಮ್ಮೆ ಇದೆ. ಒಬ್ಬರಿಗಾದ್ರೂ ನಾಲ್ಕು ಓಟ್ ಹಾಕ್ಸೋ ತಾಖತ್ ಇದೆಯಾ ಎಂದು ಕಿಡಿಕಾರಿದರು.
ರಾಜ್ಯದ ದೃಷ್ಟಿಯಿಂದ ಹಾಗೂ ಸ್ವಾಭಿಮಾನದ ಕಾರಣಕ್ಕಾಗಿ ಎಂಎಲ್ ಸಿ ಸ್ಥಾನ ತ್ಯಜಿಸುವ ಹಾಗೂ ಕಾಂಗ್ರೆಸ್ ತೊರೆಯುವ ತೀರ್ಮಾನಕ್ಕೆ ಬಂದಿದ್ದೇನೆ. ಕಾಂಗ್ರೆಸ್ ನಲ್ಲಿ ಸ್ವಾಭಿಮಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಬ್ರಾಹಿಂ ತಿಳಿಸಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಜೊತೆ ಚರ್ಚೆ ಮಾಡಿ ಮುಂದಿನ ನಡೆಯನ್ನು ಪ್ರಕಟಿಸುತ್ತೇನೆ. ಮುಂದಿನ ಹೆಜ್ಜೆ ಏನೆಂಬುದನ್ನು ಇನ್ನೆರೆಡು ದಿನಗಳಲ್ಲಿ ಪ್ರಕಟಿಸುವುದಾಗಿ ಹೇಳಿದರು.
ಜೆಡಿಎಸ್ ಸೇರಬೇಕು ಎಂಬುದು ನನ್ನ ಇಚ್ಛೆ. ಅವರ ಜೊತೆ ಚರ್ಚೆ ಮಾಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಮೊದಲೇ ಹೇಳಿದ್ದೆ. ಪಂಜಾಬ್ ನಲ್ಲಿ ಆಗಿರುವುದು ಕರ್ನಾಟಕದಲ್ಲಿಯೂ ಆಗಲಿದೆ. ಇದರ ವಿರುದ್ಧ ಹೋರಾಟ ಮಣ್ಣಿನ ಮಕ್ಕಳಿಗೆ ಮಾತ್ರ ಸಾಧ್ಯ. ನಾನು ಹೆಜ್ಜೆ ಇಟ್ಟಲ್ಲಿ ದೇವರು ನನ್ನ ಕೈಬಿಟ್ಟಿಲ್ಲ. ಜನರ ನಾಡಿ ಮಿಡಿತ ನನಗೆ ಗೊತ್ತಿದೆ. ಜೆಡಿಎಸ್ ನೂರಕ್ಕೆ ನೂರು ಅಧಿಕಾರಕ್ಕೆ ಬರಲಿದೆ ಎಂದು ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.