Home ಟಾಪ್ ಸುದ್ದಿಗಳು ಮಂಗಳೂರು | ಮೇಯರ್ ಸುಧೀರ್ ಶೆಟ್ಟಿ ದುರಹಂಕಾರಿ, ಪ್ರಚಾರ ಪ್ರಿಯ: ಪ್ರವೀಣ್ ಚಂದ್ರ ಆಳ್ವ

ಮಂಗಳೂರು | ಮೇಯರ್ ಸುಧೀರ್ ಶೆಟ್ಟಿ ದುರಹಂಕಾರಿ, ಪ್ರಚಾರ ಪ್ರಿಯ: ಪ್ರವೀಣ್ ಚಂದ್ರ ಆಳ್ವ

►’ಬಿಜೆಪಿ‌ ದುರಾಡಳಿತದಿಂದ ಮಂಗಳೂರು ಮಹಾನಗರ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ’

ಮಂಗಳೂರು : 1984ರಲ್ಲಿ ಮಹಾನಗರ ಪಾಲಿಕೆ ರೂಪುಗೊಂಡ ನಂತರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷಕ್ಕೆ ಮೊದಲು ಮಾತನಾಡಲು ಅವಕಾಶ ನೀಡುವುದು ಪದ್ಧತಿಯಾಗಿತ್ತು, ಆ ಪದ್ಧತಿಯನ್ನು ಮುರಿದು ಪ್ರತಿಪಕ್ಷಗಳ ಹಕ್ಕುಗಳನ್ನು ಕಿತ್ತುಕೊಂಡಿರುವ ಮೇಯರ್ ಸುಧೀರ್ ಶೆಟ್ಟಿ ದುರಹಂಕಾರಿ ಎಂದು ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್ ಪ್ರಚಾರಪ್ರಿಯರಾಗಿದ್ದು, ಕೇವಲ ಅಭಿನಂದನೆ ಸಲ್ಲಿಸಲು ಸಾಮಾನ್ಯ ಸಭೆಯನ್ನು ಸೀಮಿತಗೊಳಿಸಿದ್ದರು, ಪ್ರತಿಪಕ್ಷಗಳ ಹಕ್ಕುಗಳನ್ನು ಕಿತ್ತುಕೊಂಡಿದ್ದಕ್ಕೆ ನಾವು ಬಾವಿಗಿಳಿದು ಪ್ರತಿಭಟನೆ ನಡೆಸಬೇಕಾಯಿತು ಎಂದು ತಿಳಿಸಿದರು.

ಮೇಯರ್ ಅವರು ತಮ್ಮ‌ಅವಧಿಯ ಕೊನೆಯ ಸಭೆಯಲ್ಲಿ ನಗರದ ಜನರ ಸಮಸ್ಯೆ ಮತ್ತು ಅಭಿವೃದ್ಧಿ ಬಗ್ಗೆ ಮಾತನಾಡಲು ಅವಕಾಶ ನೀಡದೆ ಪ್ರತಿಪಕ್ಷಗಳ ಅವಕಾಶಗಳನ್ನು ಮೊಟಕುಗೊಳಿಸಿದ್ದಾರೆ. ಮೇಯರ್ ಆಗಿ ಸುಧೀರ್ ಶೆಟ್ಟಿ ಅವರ ಒಂದು ವರ್ಷದ ಸಾಧನೆ ಶೂನ್ಯ, ಅದನ್ನು ಮರೆಮಾಚಲು ವಿಪಕ್ಷದವರಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ದೂರಿದರು.

ಬಿಜೆಪಿಯ ದುರಾಡಳಿತದಿಂದ
ಮಂಗಳೂರು ಮಹಾನಗರ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿದ ಅವರು, ಪಾಲಿಕೆ ಸದಸ್ಯರಿಗೆ ಒಂದು ರೂಪಾಯಿ ಕೂಡ ಕ್ಷೇತ್ರಾಭಿವೃದ್ಧಿ ನಿಧಿ ಕೊಟ್ಟಿಲ್ಲ ಎಂದರು. ಮನಪಾ ವ್ಯಾಪ್ತಿಯಲ್ಲಿ ನೀರಿನ ಬಿಲ್ ಏರಿಕೆಯಾಗಿದೆ, ಆಸ್ತಿ ತೆರಿಗೆ ಸೇರಿದಂತೆ ಎಲ್ಲಾ ತೆರಿಗೆಗಳು ಹೆಚ್ಚಳವಾಗಿದೆ, ತೆರಿಗೆ ಬಗ್ಗೆ ಚರ್ಚೆ ಮಾಡದೇ ಮೇಯರ್ ಅವರು ಬೆಲ್ ಹೊಡೆಯದೇ ಸಭೆಯನ್ನು ಮುಂದೂಡದೇ ಎದ್ದುಹೋಗಿದ್ದಾರೆ. ಇಂತಹ ಘಟನೆ ಮನಪಾ ಚರಿತ್ರೆಯಲ್ಲೇ ಮೊದಲು ಎಂದರು.

ಸ್ಮಾರ್ಟ್ ‌ಸಿಟಿಯಲ್ಲಿ‌ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಜನರಿಗೆ ಓಡಾಡಲು ಆಗುತ್ತಿಲ್ಲ, ಒಳಚರಂಡಿ ವ್ಯವಸ್ಥೆ ಸಂಪೂರ್ಣ ವಿಫಲ‌ ಆಗಿದೆ, ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತಿಲ್ಲ, ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಗೇಲ್‌ ಗ್ಯಾಸ್ ಲೈನ್‌ಗಾಗಿ ರಸ್ತೆಗಳನ್ನು ಅವೈಜ್ಞಾನಿಕವಾಗಿ ಅಗೆದು ಹಾಳು ಮಾಡಲಾಗಿದೆ, ನಗರದ ಸುರತ್ಕಲ್, ಕಂಕನಾಡಿ, ಕದ್ರಿ, ಉರ್ವ ಮಾರುಕಟ್ಟೆ ಓಪನ್ ಆಗುತ್ತಿಲ್ಲ, ಡೇಂಘಿ ಹರಡದಂತೆ ಔಷಧಿ ಸಿಂಪಡಿಸಿ‌ ಸಾಂಕ್ರಮಿಕ ರೋಗ ತಡೆಗಟ್ಟಲು ಕ್ರಮ ಕೈಗೊಂಡಿಲ್ಲ, ನಗರದಲ್ಲಿ ಸ್ವಚ್ಚತೆ ಇಲ್ಲ, ಕಳೆದ ನಾಲ್ಕು ವರ್ಷಗಳಿಂದ ಎಲ್‌ಇಡಿ ಲೈಟ್ ಅಳವಡಿಸಿಲ್ಲ, ಜೆಪ್ಪು ಮುಖ್ಯ ರಸ್ತೆ ಬಂದ್ ಆಗಿ ಮೂರುವರ್ಷ ಆಗಿದೆ, ಮೇಯರ್ ಒಂದೇ ಒಂದು ಪ್ರಗತಿ‌ ಪರಿಶೀಲನಾ ಸಭೆ ನಡೆಸಿಲ್ಲ ಎಂದು ದೂರಿದರು.

ಮನಪಾ ವ್ಯಾಪ್ತಿ ಕೆತ್ತಿಕಲ್‌ನಲ್ಲಿ ವಯನಾಡು, ಶಿರೂರು ಥರ ಗುಡ್ಡ ಕುಸಿತ ಆಗಿದೆ, ಹೀಗಿರುವಾಗ ಮನಪಾ ಆಡಳಿತ ಅರ್ಧ ಕಿಲೋ ಮೀಟರ್ ಅಂತರದಲ್ಲಿ ಗಗನಚುಂಬಿ ಕಟ್ಟಡಗಳಿಗೆ ಅನುಮತಿ ನೀಡುತ್ತಿದೆ, ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ 10 ಸಾವಿರ ಮಂದಿ ವಾಸ ಮಾಡಿದರೆ ಭೂಮಿಗೆ ಭಾರ ತಾಳಿಕೊಳ್ಳಲು‌ ಸಾಧ್ಯವಾಗದಂತಹ ಪರಿಸ್ಥಿತಿ ಮಾಡಿಟ್ಟಿದ್ದಾರೆ, ಹೀಗೆ ಮನಪಾದಲ್ಲಿ ಬಿಜೆಪಿ ದುರಾಡಳಿತ ನಡೆಯುತ್ತಿದೆ, ಇದರ ವಿರುದ್ಧ ನಾವು ಧ್ವನಿ ಎತ್ತುತ್ತೇವೆ ಎಂಬ ಕಾರಣಕ್ಕೆ ನಮಗೆ ಮಾತನಾಡಲು ಅವಕಾಶ ನೀಡಲ್ಲ ಎಂದು ಆರೋಪಿಸಿದರು.

ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಯಾರೇ ಹಾಳು ಮಾಡಿದರೂ ನಾವು ಖಂಡಿಸುತ್ತೇವೆ, ಬಸ್‌ಗೆ ಕಲ್ಲು ಹೊಡೆದ ಪ್ರಕರಣದಲ್ಲಿ ನಾಮನಿರ್ದೆಶಿತ ಕಾರ್ಪೊರೇಟರ್ ವಿರುದ್ಧ ನಮ್ಮ ಸರಕಾರ ಕೇಸ್ ದಾಖಲಿಸಿ ಕಾನೂನು ಕ್ರಮಕೈಗೊಂಡಿದೆ, ಪ್ರಕರಣ ಈಗ ನ್ಯಾಯಾಲಯದಲ್ಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಾಲಿಕೆ ಸದಸ್ಯರಾದ ವಿನಯ್ ರಾಜ್, ಲತೀಫ್ ಬಂದರು, ನವೀನ್ ಡಿಸೋಜಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಹಾಜರಿದ್ದರು.

Join Whatsapp
Exit mobile version