ಮಂಗಳೂರು | “ಬಿಜೆಪಿ ಜೊತೆ ಹೊಂದಾಣಿಕೆ ರಾಜಕೀಯ ನಿಲ್ಲಿಸದಿದ್ದರೆ ಕರಾವಳಿಯಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ” : ಕೆಪಿಸಿಸಿ ಸಭೆಯಲ್ಲಿ ಸ್ಥಳೀಯ ಮುಖಂಡರು ಕೊತಕೊತ

Prasthutha|

- Advertisement -

ಕೆಪಿಸಿಸಿ ಕಾರ್ಯಾಧ್ಯಕ್ಷರ ಸಭೆಯಲ್ಲಿ ಸ್ಥಳೀಯ ನಾಯಕರಿಂದ ಪ್ರಶ್ನೆಗಳ ಸುರಿಮಳೆ, ದೂರುಗಳ ಸರಮಾಲೆ

ಮಂಗಳೂರು : ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲ ಪ್ರಮುಖ ಕಾಂಗ್ರೆಸ್ ನಾಯಕರು ರಹಸ್ಯವಾಗಿ ಬಿಜೆಪಿ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ, ಹೊಂದಾಣಿಕೆ ರಾಜಕಾರಣದಿಂದ ಕಾಂಗ್ರೆಸ್ ನೆಲಕಚ್ಚುತ್ತಿದೆ, ಪಕ್ಷದ ಜವಾಬ್ದಾರಿ ಹೊತ್ತಿರುವ ಪ್ರಮುಖರು ಪಕ್ಷದ ಸಂಘಟನೆಗಳಿಗೆ ಒತ್ತು ನೀಡುತ್ತಿಲ್ಲ, ಬಿಜೆಪಿ ಸರಕಾರದ ಅವಧಿಯಲ್ಲಿ ನೇಮಕವಾಗಿ ಬಿಜೆಪಿ ಏಜೆಂಟರಂತೆ ವರ್ತಿಸುವ ಅಧಿಕಾರಿಗಳನ್ನು ಈಗಲೂ ಅವಿಭಜಿತ ಜಿಲ್ಲೆಯಲ್ಲಿ ಮುಂದುವರಿಸಲಾಗಿದೆ, ಅಕ್ರಮ ದಂಧೆಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳನ್ನು ಆಯಕಟ್ಟಿನ ಹುದ್ದೆಗಳಲ್ಲಿ‌ ಕೂರಿಸಲಾಗಿದೆ, 50 ಮತಗಳನ್ನು ತಂದುಕೊಡದ ಸಮುದಾಯಗಳಿಗೆ ನಿಗಮ ಮಂಡಳಿ ಸ್ಥಾನ ನೀಡಲಾಗಿದ್ದು ಕಾಂಗ್ರೆಸ್‌ ಮತಬ್ಯಾಂಕ್ ಆಗಿರುವ ಸಮುದಾಯಗಳನ್ನು ಕಡೆಗಣಿಸಲಾಗಿದೆ, ಕಾಂಗ್ರೆಸ್ ಸರಕಾರದಲ್ಲೂ ಸಂಘಪರಿವಾರದ ಬೆಂಬಲಿಗರನ್ನು ನಾಮನಿರ್ದೇಶನ ಮಾಡಲಾಗಿದೆ, ಬೇಕಾಬಿಟ್ಟಿ ನೇಮಕಾತಿಗಳು ನಡೆಯುತ್ತಿದ್ದು ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರಿಗೆ ಮಾನ್ಯತೆ ಸಿಗುತ್ತಿಲ್ಲ, ಕಾರ್ಯಕರ್ತರ ಜೊತೆ ಉಸ್ತುವಾರಿ ಸಚಿವರು ಮತ್ತು ಪ್ರಮುಖ ನಾಯಕರಿಗೆ ಸಂಪರ್ಕವೇ ಇಲ್ಲ, ಕಾರ್ಯಕರ್ತರ ಭಾವನೆಗಳಿಗೆ ಸ್ಪಂದನೆ‌ ಸಿಗುತ್ತಿಲ್ಲ, ಬೇಡಿಕೆಗಳು ಈಡೇರಿಸುತ್ತಿಲ್ಲ, ಕೋಮು ದ್ವೇಷ ಭಾಷಣಕಾರ ಮೇಲೆ ಕಾನೂನು ಕ್ರಮಗಳು ಜರುಗುತ್ತಿಲ್ಲ, ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಲಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೆ ಎಂಬ ಆಶಾಭಾವನೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರಲ್ಲಿ ಮೂಡುತ್ತಿಲ್ಲ.
ಇದಿಷ್ಟು ಮಂಗಳೂರಿನಲ್ಲಿ‌ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಖಂಡರು ಇಟ್ಟಿರುವ ದೂರುಗಳು.

- Advertisement -

ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಪಕ್ಷ ಸಂಘಟನೆ ಮತ್ತು ವಿಧಾನ ಪರಿಷತ್ ಉಪಚುನಾವಣೆಯ ಸಿದ್ಧತೆಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು ತಂಡ ನಿನ್ನೆ ಮಂಗಳೂರಿಗೆ ಭೇಟಿ ನೀಡಿತ್ತು.‌ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ‌ ಚಂದ್ರಶೇಖರ್, ಮಂಜುನಾಥ್ ಭಂಡಾರಿ ಮತ್ತು ವಸಂತ್ ಕುಮಾರ್ ನಿನ್ನೆ ಮಧ್ಯಾಹ್ನ ನಗರದ ಕಾಂಗ್ರೆಸ್ ಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಹಾಜರಿದ್ದ ಉಭಯ ಜಿಲ್ಲೆಯ ಜಿಲ್ಲಾ ಸಮಿತಿಯ ನಾಯಕರು ಮತ್ತು ಬ್ಲಾಕ್ ಮಟ್ಟದ ನಾಯಕರು ಸ್ವಪಕ್ಷದ ವಿರುದ್ಧವೇ ಆಕ್ರೋಶಗೊಂಡಿರುವುದು ಮೂಲಗಳಿಂದ ತಿಳಿದುಬಂದಿದೆ.

‘ಬಿಜೆಪಿ ಜೊತೆ ಕೆಲವರು ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿದೆ‌’ ಎಂದು ಕಾಂಗ್ರೆಸ್ ಮುಖಂಡರು ದೂರಿದ್ದಾರೆ. ‘ಇಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿಯಾಗಿದೆ, ಆದರೆ ಹೊಂದಾಣಿಕೆ ರಾಜಕಾರಣದಿಂದಾಗಿ ಕೆಲ ಕ್ಷೇತ್ರಗಳಲ್ಲಿ ಸೋಲಾಗಿದೆ, ಹೊಂದಾಣಿಕೆ ರಾಜಕಾರಣ ಕೊನೆಗೊಳ್ಳದಿದ್ದರೆ ಭವಿಷ್ಯದಲ್ಲೂ ಪಕ್ಷಕ್ಕೆ ನಷ್ಟ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಬ್ಲಾಕ್ ಅಧ್ಯಕ್ಷರಿಗೆ ಪಕ್ಷದಲ್ಲಿ ಬೆಲೆ ಇಲ್ಲ, ಕಾರ್ಯಕರ್ತರಿಗೂ ಮನ್ನಣೆ ಸಿಗುತ್ತಿಲ್ಲ’ ಎಂದು ಕೆಲವರು ಬೇಸರಿಸಿದರು ಎಂದು ತಿಳಿದುಬಂದಿದೆ.

‘ಕೆಲವೇ ಕೆಲವು ಪ್ರಭಾವಿಗಳು ಸೇರಿಕೊಂಡು ಅವಿಭಜಿತ ಜಿಲ್ಲೆಯನ್ನು ನಿಯಂತ್ರಿಸುತ್ತಿದ್ದಾರೆ, ಅಕ್ರಮ ದಂಧೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ, ಭ್ರಷ್ಟರು ಮತ್ತು ಬಿಜೆಪಿಯ ಏಜೆಂಟರಂತೆ ಕೆಲಸ ಮಾಡುವ ಕೆಲವು ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಲಾಗಿದೆ. ಈ ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸಸ್ಪೆಂಡ್ ಆಗಿದ್ಧ ಗಿರೀಶ್ ಮೋಹನ್ ಅವರನ್ನು ಮರಳಿ ದಕ್ಷಿಣ ಕನ್ನಡ ಜಿಲ್ಲೆಗೆ ಕರೆತಂದು ಭೂ ವಿಜ್ಞಾನ ಇಲಾಖೆಯಲ್ಲಿ ಕೂರಿಸಲಾಗಿದೆ, ಅವರು ಅಕ್ರಮಗಳಿಗೆ ಸಾಥ್ ನೀಡುತ್ತಿದ್ದು ಅವರನ್ನು ಎತ್ತಂಗಡಿ ಮಾಡಬೇಕು, ಮಂಗಳೂರು ನಗರದ ಎಸಿಪಿಯೊಬ್ಬರು ಬಿಜೆಪಿ ಏಜೆಂಟ್ ಥರ ವರ್ತಿಸುತ್ತಿದ್ದಾರೂ ಅವರನ್ನು ಎತ್ತಂಗಡಿ ಮಾಡುತ್ತಿಲ್ಲ, ಅವರನ್ನು ಕಾಣದ ಕೈಗಳು ರಕ್ಷಣೆ ಮಾಡುತ್ತಿದೆ, ಸಹಕಾರ ಇಲಾಖೆಯ DRO ಸಂಘಪರಿವಾರದ ಅಣತಿಯಂತೆ ಕೆಲಸ ಮಾಡುತ್ತಿದ್ದರೂ ಅವರಿಗೆ ಆಯಕಟ್ಟಿನ ಜಾಗ ನೀಡಲಾಗಿದೆ, ಇದರಿಂದ ಸಹಕಾರ ರಂಗದಲ್ಲಿ ಬಿಜೆಪಿ ಸಂಘಪರಿವಾರದ ಹಿಡಿತ ಬಲವಾಗುತ್ತಿದೆ, ಕಾಂಗ್ರೆಸ್ ಸರಕಾರ ಇದ್ದರೂ ಬಿಜೆಪಿ ಮತ್ತು ಸಂಘಪರಿವಾರವೇ ಜಿಲ್ಲೆಯನ್ನು ನಿಯಂತ್ರಿಸುತ್ತಿದೆ ಎಂದು ಆರೋಪಗಳ ಸುರಿಮಳೆಗೈದಿದ್ದಾರೆ.

‘ಕರಾವಳಿ ಜಿಲ್ಲೆಯಲ್ಲೂ ಕಾಂಗ್ರೆಸ್ ಸರಕಾರವೇ ಆಡಳಿತ ನಡೆಸಬೇಕು, ಕಾಣದ ಕೈಗಳಿಗೆ ಜಿಲ್ಲೆಯ ಆಡಳಿತವನ್ನು ನಿಯಂತ್ರಿಸಲು ಅವಕಾಶ ಮಾಡಿಕೊಡಬಾರದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು, ಅಕ್ರಮಗಳಿಗೆ ಸಹಕಾರ ನೀಡುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು, ಬಿಜೆಪಿಯವರ ಜೊತೆ ಶಾಮೀಲಾಗಿರುವ ಧಾರ್ಮಿಕ ಪರಿಷತ್ ನಾಮನಿರ್ದೆಶಿತ ಸದಸ್ಯೆ ಮಲ್ಲಿಕಾ ಪಕ್ಕಳ ಅವರ ಸದಸ್ಯತ್ವನ್ನು ತಕ್ಷಣವೇ ಹಿಂಪಡೆಯಬೇಕು, ದಂಧೆಗೆ ಸಾಥ್ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಭೂ ವಿಜ್ಞಾನಿ ಅಧಿಕಾರಿ ಮತ್ತು ಶಾಸಕ ವೇದವ್ಯಾಸ್ ಕಾಮತ್ ಅಣತಿಯಂತೆ ಕೆಲಸ ಮಾಡುವ ಎಸಿಪಿಗಳನ್ನು ಎತ್ತಂಗಡಿ ಮಾಡಬೇಕು ಎಂಬ ಆಗ್ರಹಗಳು ಸಭೆಯಲ್ಲಿ ಕೇಳಿಬಂದಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಭಾಷಣ ಮಾಡುವ ಶರಣ್ ಪಂಪ್ವೆಲ್ ಮತ್ತು ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಬೆದರಿಕೆ ಹಾಕಿರುವ ಹರೀಶ್ ಪೂಂಜ ವಿರುದ್ಧ ಕಠಿಣ ಕ್ರಮಕೈಗೊಳ್ಳದಿರುವ ಬಗ್ಗೆಯೂ ಕೆಪಿಸಿಸಿ ನಾಯಕರನ್ನು ಸ್ಥಳೀಯ ಮುಖಂಡರು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ನಕಲಿ ಪರಶುರಾಮ ಮೂರ್ತಿ ಪ್ರಕರಣದಲ್ಲಿ ಸುನೀಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲು ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ಮಾಡಬೇಕಾಯಿತು, ಸರ್ಕಾರ ಕೇಸ್ ದಾಖಲಿಸಲು ಎಂಟು ತಿಂಗಳು ಸಮಯ ವ್ಯರ್ಥ ಮಾಡಿದೆ ಎಂದು ಕಾರ್ಕಳದ ಕೈ ಅಭ್ಯರ್ಥಿ ಉದಯ್ ಕುಮಾರ್ ಮುನಿಯಾಲು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಪ್ರಕಾಶ್ ಶೆಟ್ಟಿ ತುಂಬೆ, ಶಶಿಧರ್ ಹೆಗ್ಡೆ, ಪಿಯೂಸ್ ರೋಡ್ರಿಗಸ್ ಸೇರಿದಂತೆ 30ಕ್ಕೂ ಅಧಿಕ ನಾಯಕರು ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶದಿಂದ ಮಾತನಾಡಿದರು ಎಂದು ತಿಳಿದುಬಂದಿದೆ.

ಅವಿಭಜಿತ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿ ಬಲಪಡಿಸುವುದಾದರೆ ಹೊಂದಾಣಿಕೆ ರಾಜಕಾರಣ ಅಂತ್ಯವಾಗಬೇಕು, ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಹಾದಿಯಲ್ಲಿ ತತ್ವ ಸಿದ್ಧಾಂತ ಬದ್ಧತೆ ಮತ್ತು ಧೈರ್ಯದ ರಾಜಕಾರಣ ಮಾಡಬೇಕು’ ಎಂಬ ಅಭಿಪ್ರಾಯ ಮಂಡನೆಯಾಗಿದೆ.

ಬ್ಲಾಕ್ ಅಧ್ಯಕ್ಷರು ಮತ್ತು ಕಾರ್ಯಕರ್ತರಿಗೆ ಗೌರವ ಸಿಗಬೇಕು, ಸ್ಥಳೀಯ ಮುಖಂಡರು ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು, ಪ್ರಮುಖ ನಾಯಕರು ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿರಬೇಕು, ಕಾರ್ಯಕರ್ತರ ಭಾವನೆ ಮತ್ತು ಬೇಡಿಕೆಗಳಗೆ ಸ್ಪಂದನೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಕಾಂಗ್ರೆಸ್ ಮುಖಂಡರ ದೂರುಗಳು, ಆಭಿಪ್ರಾಯಗಳು, ಮನವಿಗಳಯ ಮತ್ತು ಬೇಡಿಕೆಗಳನ್ನು ಕೆಪಿಸಿಸಿ ತಂಡ ಮೌನವಾಗಿ ಆಲಿಸಿದ್ದು ಎಲ್ಲವನ್ನು ವರಿಷ್ಠರ ಗಮನಕ್ಕೆ ತರುವುದಾಗಿ ಅಶ್ವಾಸನೆ ನೀಡಿದ್ದು, ಬೇಡಿಕೆ ಈಡೇರಿಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸುತ್ತೇವೆ, ತಪ್ಪುಗಳನ್ನು ಸರಪಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಭೆಯಲ್ಲಿ ಮಾಜಿ‌ ಸಚಿವ ರಮಾನಾಥ ರೈ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿಜಯ್ ಮುಳಗುಂದ್, ಬಿ ಬಾಲರಾಜ್, ಸತ್ಯನಾರಾಯಣ್, ಎಂ.ಎಸ್ ಮಹಮ್ಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



Join Whatsapp
Exit mobile version