ಮಂಗಳೂರು: ಸೂಕ್ತ ದಾಖಲೆ ಪತ್ರಗಳಿಲ್ಲದೆ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,48,58,000 ರೂ. ನಗದು ಹಾಗೂ 40 ಲಕ್ಷ ರೂ. ಮೌಲ್ಯದ 800 ಗ್ರಾಂ ಚಿನ್ನಾಭರಣಗಳನ್ನು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸರು ರವಿವಾರ ಪತ್ತೆ ಹಚ್ಚಿ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ರಾಜಸ್ಥಾನದ ಮಹೇಂದ್ರ ಸಿಂಗ್ (35) ಬಂಧಿತ ಆರೋಪಿ. ಈತ ಮಹಾರಾಷ್ಟ್ರದ ಪನ್ವೆಲ್‌ನಿಂದ ಕೇರಳದ ಕೋಝಿಕೋಡ್‌ಗೆ ರೈಲು ಟಿಕೆಟ್ ಪಡೆದು ಸಂಚರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಬಿಗಿ ತಪಾಸಣೆ ನಡೆಯುತ್ತಿದೆ. ಕೇರಳ ಕಡೆಗೆ ಹೋಗುತ್ತಿದ್ದ ಡುರೊಂಟೊ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರನ್ನು ಮಂಗಳೂರು ಜಂಕ್ಷನ್‌ನಲ್ಲಿ ರೈಲು ನಿಂತಿದ್ದ ಸಂದರ್ಭದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಈ ಅಕ್ರಮ ಹಣ ಸಾಗಾಟ ಪ್ರಕರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಆರೋಪಿಯ ಬಳಿಯಿದ್ದ ಕಪ್ಪು ಬಣ್ಣದ ಬ್ಯಾಗ್ ತಪಾಸಣೆ ನಡೆಸಿದಾಗ ಅದರಲ್ಲಿ ಈ ನಗದು ಮತ್ತು ಚಿನ್ನಾಭರಣ ಸಿಕ್ಕಿದೆ.
ಮಂಗಳೂರು ರೈಲ್ವೇ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಕೊಟ್ಟಾರಿ ಮತ್ತು ಆರ್‌ಪಿಎಫ್ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.