Home ಕರಾವಳಿ ಮಂಗಳೂರು: ಸಂಘಪರಿವಾರದಿಂದ ಕೋಡಿಕಲ್ ಬಂದ್ ವೇಳೆ ಬಸ್ ಗೆ ಕಲ್ಲೆಸೆತ

ಮಂಗಳೂರು: ಸಂಘಪರಿವಾರದಿಂದ ಕೋಡಿಕಲ್ ಬಂದ್ ವೇಳೆ ಬಸ್ ಗೆ ಕಲ್ಲೆಸೆತ

ಮಂಗಳೂರು: ನಾಗಬನಕ್ಕೆ ಹಾನಿ ಎಸಗಿದ ದುಷ್ಕೃತ್ಯವನ್ನು ಖಂಡಿಸಿ ಸೋಮವಾರ ವಿಶ್ವ ಹಿಂದೂ ಪರಿಷತ್-ಬಜರಂಗ ದಳದ ವತಿಯಿಂದ ಕೋಡಿಕಲ್ ಬಂದ್ ನಡೆಸಲಾಗಿದ್ದು, ಈ ವೇಳೆ ಖಾಸಗಿ ಬಸ್ಸೊಂದಕ್ಕೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

ಇತ್ತೀಚೆಗೆ ಕೋಡಿಕಲ್ ನ ನಾಗಬನಕ್ಕೆ ದುಷ್ಕರ್ಮಿಗಳು ಹಾನಿ ಎಸಗಿದ್ದರು. ಇದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬಜರಂಗದಳ, ಹಿಂದೂ ಜಾಗರಣ ವೇದಿಕೆಯವರು ಸೋಮವಾರ ಕೋಡಿಕಲ್ ಬಂದ್ ಗೆ ಕರೆ ನೀಡಿದ್ದರು.

ಇದೇ ವೇಳೆ ಕೋಡಿಕಲ್ ಕ್ರಾಸ್ ಬಳಿ ಖಾಸಗಿ ಬಸ್ಸಿಗೆ ಕಲ್ಲು ಎಸೆದು ಗಾಜನ್ನು ಹಾನಿಗೊಳಿಸಲಾಗಿದೆ. ಇಂದು ಮಧ್ಯಾಹ್ನ ಮಣಿಪಾಲ-ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ.

ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಎಕೆಎಂಎಸ್ ಎಕ್ಸ್ ಪ್ರೆಸ್ ಬಸ್ ಕೋಡಿಕಲ್ ಕ್ರಾಸ್ ತಲುಪಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳು ಬಸ್ಸಿನ ಗಾಜಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಶನಿವಾರ ಕೂಡ ಕೂಳೂರು ಬಳಿ ಖಾಸಗಿ ಬಸ್ಸೊಂದಕ್ಕೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದರು.

Join Whatsapp
Exit mobile version