ಮುಂಬೈ: ಕಳೆದ ಆರು ತಿಂಗಳ ಅವಧಿಯಲ್ಲಿ 16 ವರ್ಷದ ಬಾಲಕಿಯ ಮೇಲೆ 400 ಮಂದಿ ಅತ್ಯಾಚಾರವೆಸಗಿರುವ ಘೋರ ಕೃತ್ಯ ಮಹಾರಾಷ್ಟ್ರದ ಬೀಡ್ ಜಿಲ್ಲೆಯಿಂದ ವರದಿಯಾಗಿದೆ.
400 ಮಂದಿ ಕಳೆದ ಆರು ತಿಂಗಳಿನಿಂದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದೀಗ ಸಂತ್ರಸ್ತ ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿದ್ದು, ಬಾಲಕಿ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಕೂಡಾ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅತ್ಯಾಚಾರ ಮತ್ತು ಕಿರುಕುಳ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಸಂತ್ರಸ್ತೆಯ ತಾಯಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದು, ತಾಯಿಯ ಮರಣದ ನಂತರ, ತಂದೆಯು ಮಗಳ ಮದುವೆಯನ್ನು ಮಾಡಿದ್ದರು. ಆದರೆ, ಪತಿ ಮತ್ತು ಅತ್ತೆ-ಮಾವಂದಿರು ಬಾಲಕಿಯನ್ನು ನಿರಂತರವಾಗಿ ಥಳಿಸುತ್ತಾ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಪತಿಯ ಮನೆಯವರು ನೀಡಿರುವ ಕಿರುಕುಳದಿಂದ ಬೇಸತ್ತ ಬಾಲಕಿ ತಂದೆಯ ಬಳಿಗೆ ತೆರಳಿದ್ದು, ತಂದೆ ಬಾಲಕಿಯನ್ನು ಮನೆಗೆ ಸೇರಿಸಿಕೊಳ್ಳದೆ ಇದ್ದುದರಿಂದ ಬೀಡ್ ಜಿಲ್ಲೆಯ ಅಂಬೆಜೋಗೈ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದರು. ಈ ಸಮಯದಲ್ಲಿ ಅವರ ಮೇಲೆ ಲೈಂಗಿಕ ಶೋಷಣೆ ಪ್ರಾರಂಭವಾಗಿದೆ.
ಸಂತ್ರಸ್ತೆ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ದೂರು ನೀಡಲು ಅಂಬೆಜೋಗೈ ನಗರ ಪೊಲೀಸ್ ಠಾಣೆಗೆ ತೆರಳಿದ್ದಾಗ ಪೊಲೀಸರು ಯಾವುದೇ ಕ್ರಮಗೊಳ್ಳದೆ ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.
ಅಂತಿಮವಾಗಿ ಈ ವಾರ ಪೊಲೀಸರು ದೂರು ಪಡೆದು, ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.