ಅಹಮದಾಬಾದ್: ‘ಯಾರು ಪಕ್ಷದ ಕೆಲಸದಲ್ಲಿ ಸಹಾಯ ಮಾಡುವುದಿಲ್ಲವೋ ಅವರು ವಿಶ್ರಾಂತಿ ಪಡೆಯಲಿ. ಯಾರು ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುವುದಿಲ್ಲವೋ ಅವರು ನಿವೃತ್ತಿ ಪಡೆಯಲಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದರು.
ಎಐಸಿಸಿ ಅಧಿವೇಶನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಖರ್ಗೆ, ಪಕ್ಷದ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷರ ಪಾತ್ರ ಪ್ರಮುಖವಾಗಿದೆ. ಆದ್ದರಿಂದ, ಎಐಸಿಸಿ ಮಾರ್ಗಸೂಚಿಯಂತೆ ಜಿಲ್ಲಾಧ್ಯಕ್ಷರ ನೇಮಕವನ್ನು ಕಟ್ಟುನಿಟ್ಟಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡಬೇಕು’ ಎಂದು ಹೇಳಿದರು.
‘ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಒಂದು ವರ್ಷದೊಳಗೆ ಜನರನ್ನು ಸೇರಿಸಿಕೊಂಡು ಬೂತ್ ಸಮಿತಿ, ಮಂಡಲ ಸಮಿತಿ, ಬ್ಲಾಕ್ ಸಮಿತಿ ಮತ್ತು ಜಿಲ್ಲಾ ಸಮಿತಿಗಳನ್ನು ರಚಿಸಬೇಕು’ ಎಂದು ಜಿಲ್ಲಾ ಮುಖಂಡರಿಗೆ ಸಲಹೆ ನೀಡಿದರು.
‘ದೇಶದ ಎಲ್ಲಾ ಜಿಲ್ಲಾಧ್ಯಕ್ಷರೊಂದಿಗೆ ಮೂರು ಸಭೆ ನಡೆಸಿದ್ದೇವೆ. ಈ ವೇಳೆ ನಾನು ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆದುಕೊಂಡಿದ್ದೇವೆ. ಭವಿಷ್ಯದಲ್ಲಿ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲಾಧ್ಯಕ್ಷರು ಒಳಗೊಳ್ಳಲಿದ್ದಾರೆ’ ಎಂದು ಹೇಳಿದರು.