Home ಕರಾವಳಿ ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ಆತ್ಮಹತ್ಯೆ ಪ್ರಕರಣ: ಯಶ್ ಪಾಲ್ ಸುವರ್ಣ ತಕ್ಷಣ ಬಂಧನವಾಗಲಿ-...

ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ಆತ್ಮಹತ್ಯೆ ಪ್ರಕರಣ: ಯಶ್ ಪಾಲ್ ಸುವರ್ಣ ತಕ್ಷಣ ಬಂಧನವಾಗಲಿ- ಎಸ್’ಡಿಪಿಐ

ಉಡುಪಿ: ಉಡುಪಿ ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯ ಮಲ್ಪೆ ಶಾಖೆಯ ವ್ಯವಸ್ಥಾಪಕರಾಗಿದ್ದ ಪರಿಶಿಷ್ಟ ಜಾತಿಗೆ ಸೇರಿದ ಸುಬ್ಬಣ್ಣ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬ್ಯಾಂಕಿನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹಾಗೂ ಇತರ ಆರೋಪಿಗಳನ್ನು ತಕ್ಷಣ ಪೊಲೀಸರು ಬಂಧಿಸಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ಒತ್ತಾಯಿಸಿದ್ದಾರೆ.


ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸುಬ್ಬಣ್ಣ ಅವರು ಗುರುವಾರ ರಾತ್ರಿ ಮಲ್ಪೆಯ ಲಾಡ್ಜ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ದೇಹದ ಬಳಿ ಡೆತ್ ನೋಟ್ ದೊರಕಿದ್ದು ಅದರಲ್ಲಿ ಸಾವಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಒತ್ತಡ ಹಾಗೂ ಮೇಲಾಧಿಕಾರಿಗಳ ಅಸಹಕಾರ ಮತ್ತು ಸಾಲಗಾರನ ಮೋಸದ ನಡವಳಿಕೆ ಕಾರಣ ಎಂದು ಬರೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿರುವ ಯಶ್ಪಾಲ್ ಸುವರ್ಣ ಮತ್ತು ಆಡಳಿತ ಮಂಡಳಿಯವರು ಸಾಲ ವಸೂಲಾತಿಯನ್ನು ಮಾಡಿಕೊಡದಿದ್ದರೆ ನಿನ್ನ ಮನೆಯನ್ನಾದರೂ ಮಾರಿ ಬ್ಯಾಂಕಿನ ಸಾಲ ಪಾವತಿಸಬೇಕು ಇಲ್ಲದಿದ್ದರೆ ನಿನ್ನನ್ನು ಕೊಲ್ಲುವುದಾಗಿ ಮೃತ ಸುಬ್ಬಣ್ಣ ರವರಿಗೆ ಬೆದರಿಕೆ ಹಾಗೂ ಮಾನಸಿಕ ಒತ್ತಡವನ್ನು ನೀಡಿದ ಕಾರಣ ಸುಬ್ಬಣ್ಣರವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಸಹೋದರ ಸುರೇಶ್ ಕೆ ಮಲ್ಪೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸುವರ್ಣ ರವರು ದಶಕಗಳಿಂದ ಜಿಲ್ಲೆಯಲ್ಲಿ ಕೋಮು ವೈಷಮ್ಯವನ್ನು ಮೂಡಿಸುವ ಮೂಲಕ ಸಮಾಜದ ಶಾಂತಿ ಸೌಹಾರ್ದತೆಯನ್ನು ಕೆಡಿಸುವಲ್ಲಿ ನಿರತರಾಗಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್’ಐಆರ್ ದಾಖಲಾಗಿದ್ದರೂ ಅವರ ಬಂಧನವಾಗಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಕೂಡಲೇ ಬ್ಯಾಂಕಿನ ಅಧ್ಯಕ್ಷರಾಗಿರುವ ಯಶ್ ಪಾಲ್ ಸುವರ್ಣ ಹಾಗೂ ಇತರ ಆರೋಪಿಗಳನ್ನು ಬಂಧಿಸಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಶಾಹಿದ್ ಅಲಿ ಆಗ್ರಹಿಸಿದ್ದಾರೆ

Join Whatsapp
Exit mobile version