Home ಟಾಪ್ ಸುದ್ದಿಗಳು ಲವ್ ಜಿಹಾದ್ ಎಂದು ಆರೋಪಿಸಿದ್ದ ಪ್ರಕರಣ ಸುಖಾಂತ್ಯ: ವೈವಾಹಿಕ ಜೀವನಕ್ಕೆ ಕಾಲಿರಿಸಿದ ಜೋಡಿ

ಲವ್ ಜಿಹಾದ್ ಎಂದು ಆರೋಪಿಸಿದ್ದ ಪ್ರಕರಣ ಸುಖಾಂತ್ಯ: ವೈವಾಹಿಕ ಜೀವನಕ್ಕೆ ಕಾಲಿರಿಸಿದ ಜೋಡಿ

ನಾಸಿಕ್ : ನಾಸಿಕ್ ನ ಸಾಂಪ್ರದಾಯಿಕ ಹಿಂದೂ ಕುಟುಂಬವು ತಮ್ಮ 28 ವರ್ಷದ ಪುತ್ರಿಯನ್ನು ಮುಸ್ಲಿಮ್ ಯುವಕನೊಂದಿಗೆ ಮದುವೆ ಮಾಡಿಸುವ ಮೂಲಕ ಈ ಬಗ್ಗೆ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆದಿದೆ.

ಸಮುದಾಯದ ತೀವ್ರ ವಿರೋಧ ಮತ್ತು ಪ್ರತಿಭಟನೆಯ ಹಿನ್ನೆಲೆಯಲ್ಲಿ ಆ ಕುಟುಂಬದ ಹಿರಿಯರು ಈ ವಿವಾಹದಿಂದ ಹಿಂದೆ ಸರಿದಿದ್ದರು. ಈ ಮಧ್ಯೆ ಎರಡೂ ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹಸಮಣೆ ಏರುವ ಮೂಲಕ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಈ ಪ್ರಕರಣ ಸುಖಾಂತ್ಯ ಕಂಡಿದೆ.

ಈ ವಿವಾಹಕ್ಕೆ ಸಂಬಂಧಿಸಿದ ಆಮಂತ್ರಣ ಪತ್ರ ಹಲವಾರು ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಈ ಕುಟುಂಬವು ಪ್ರತಿಭಟನೆ, ಅಪರಿಚಿತರಿಂದ ಬೆದರಿಕೆ ಕರೆ ಎದುರಿಸಿದ್ದ ಕಾರಣಕ್ಕಾಗಿ ಜುಲೈ 18 ರಂದು ನಡೆಯಬೇಕಾಗಿದ್ದ ವಿವಾಹವನ್ನು ರದ್ದುಗೊಳಿಸಬೇಕಾಯಿತು ಎಂದು ಖ್ಯಾತ ಮಾಧ್ಯಮವೊಂದು ಜುಲೈ 13 ಕ್ಕೆ ವರದಿ ಮಾಡಿತ್ತು. ಪ್ರತಭಟನಕಾರರು ಈ ಮದುವೆಯನ್ನು ಲವ್ ಜಿಹಾದ್ ಎಂದು ಬಣ್ಣಿಸಿ ವಿವಾದ ಸೃಷ್ಟಿಸಿದ್ದರು.

ನಗರದ ಪ್ರಮುಖ ಚಿನ್ನ ವ್ಯಾಪಾರಿ ವಧುವಿನ ತಂದೆ ಪ್ರಸಾಬ್ ಅಡ್ಗಾಂವ್ಕರ್ ವ್ಯಾಪಕವಾದ ಪ್ರತಿಭಟನೆಯ ಒತ್ತಡಕ್ಕೆ ಸಿಲುಕಿ ಈ ವಿವಾಹವನ್ನು ರದ್ದುಗೊಳಿಸಿದ್ದರು. ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಸಚಿವರಾದ ಬಚ್ಚು ಕಡು ಸೇರಿದಂತೆ ರಾಜಕಾರಣಿಗಳು ಮತ್ತು ಸಾಮಾಜಿಕ ಸಂಘಟನೆಗಳು ಈ ಕುಟುಂಬಕ್ಕೆ ಬೆಂಬಲ ನೀಡಿದ ನಿಟ್ಟಿನಲ್ಲಿ ರಸಿಕಾ ಅಡ್ಗಾಂವ್ಕರ್, ಆಸೀಫ್ ಖಾನ್ ಜೋಡಿ ಅಂತಿಮವಾಗಿ ಜುಲೈ 22 ಗುರುವಾರ ದಂದು ಎರಡು ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಂತೆ ಲವ್ ಜಿಹಾದ್ ಅಥವಾ ಬಲವಂತದ ಮತಾಂತರ ಪ್ರಕರಣವಲ್ಲವೆಂದು ಅಡ್ಗಾಂವ್ಕರ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಎಂಟು ವರ್ಷಗಳಿಂದ ರಸಿಕಾ ಮತ್ತು ಆಸಿಫ್ ಒಬ್ಬರಿಗೊಬ್ಬರು ಅರ್ಥೈಸಿಕೊಂಡಿದ್ದಾರೆ. ಈಗ ಇಬ್ಬರೂ ಮದುವೆಯಾಗಬೇಕೆಂಬ ಬಯಕೆಯ ಬಗ್ಗೆ ತಮ್ಮ ಕುಟುಂಬಕ್ಕೆ ತಿಳಿಸಿದ್ದರು ಎಂದು ಆಭರಣ ವ್ಯಾಪಾರಿ ಪ್ರಸಾದ್ ಅಡ್ಗಾಂವ್ಕರ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಲವ್ ಜಿಹಾದ್ ಎಂದು ವಿವಾದಕ್ಕೆ ಕಾರಣವಾಗಿದ್ದ ಪ್ರಕರಣವೊಂದು ಎರಡೂ ಕುಟುಂಬದ ಸಕಾಲಿಕ ತೀರ್ಮಾನದಿಂದ ಸುಖಾಂತ್ಯವಾಗಿದೆ.

Join Whatsapp
Exit mobile version