Home ಟಾಪ್ ಸುದ್ದಿಗಳು ಮಹಾರಾಷ್ಟ್ರದ ಭೀಕರ ಮಳೆಗೆ 136 ಮಂದಿ ಬಲಿ: ರಾಯಗಡದಲ್ಲಿ ರಕ್ಷಣಾ ಕಾರ್ಯಾಚರಣೆ ಚುರುಕು

ಮಹಾರಾಷ್ಟ್ರದ ಭೀಕರ ಮಳೆಗೆ 136 ಮಂದಿ ಬಲಿ: ರಾಯಗಡದಲ್ಲಿ ರಕ್ಷಣಾ ಕಾರ್ಯಾಚರಣೆ ಚುರುಕು

ಮುಂಬೈ: ಮಹಾರಾಷ್ಟ್ರದಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ನಗರಗಳಲ್ಲಿ ಪ್ರವಾಹ ಉಂಟಾಗಿದ್ದು, ಭೂಕುಸಿತ ಸೇರಿದಂತೆ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಕನಿಷ್ಠ 136 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕರಾವಳಿ ಪಟ್ಟಣವಾದ ರಾಯಗಡ್ ಜಿಲ್ಲೆಯ ಹಳ್ಳಿವೊಂದರಲ್ಲಿ ಸಂಭವಿಸಿದ ಭೂಕುಸಿತದಲ್ಲಿ 36 ಜನರು ಸಾವನ್ನಪ್ಪಿದ್ದರೆ ಸುಮಾರು 40 ಜನರು ಭೀಕರ ಪ್ರವಾಹಕ್ಕೆ ಸಿಲುಕಿ ನೀರು ಪಾಲಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮುಂದಿನ ಮೂರು ದಿನಗಳಲ್ಲಿ ಮಹಾರಾಷ್ಟ್ರದಾದ್ಯಂತ ಭಾರೀ ಮಳೆಯಾಗುವ ಕುರಿತು ಮುನ್ನೆಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಕೆಂಪು ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಭಾರೀ ಮಳೆಯಿಂದಾಗಿ ವಿವಿಧ ನದಿಗಳಲ್ಲಿ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿರುವುದರಿಂದ ಶುಕ್ರವಾರ ರಾಜ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆ ನಡೆಸಲು ಭಾರತೀಯ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸಲಾಗಿದೆ. ಪ್ರಸ್ತುತ, ರತ್ನಾಗಿರಿ, ರಾಯಗಡ್, ಪುಣೆ, ಸತಾರಾ, ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಿಗೆ ಅಪಾರ ಪ್ರಮಾಣದ ನಾಶನಷ್ಟ ಸಂಭವಿಸಿದೆ.

ಅಪಾರ ನಾಶ ನಷ್ಟವಾದ ಮಹಾರಾಷ್ಟ್ರಕ್ಕೆ ವಿಶೇಷ ಪ್ಯಾಕೇಜ್ ಗಾಗಿ ಹಲವು ರಾಜಕೀಯ ಪಕ್ಷದ ಮುಖಂಡರು, ಪತ್ರಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮಹರಾಷ್ಟ್ರದಾದ್ಯಂತ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿದೆ.

Join Whatsapp
Exit mobile version