Home ಮೀಟುಗೋಲು ಹಿಂದುತ್ವದ ಕಪಿಮುಷ್ಟಿಯಿಂದ ಭಾರತವನ್ನು ರಕ್ಷಿಸೋಣ

ಹಿಂದುತ್ವದ ಕಪಿಮುಷ್ಟಿಯಿಂದ ಭಾರತವನ್ನು ರಕ್ಷಿಸೋಣ

ಒಂದು ಕಾಲದಲ್ಲಿ ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿದ್ದ, ಬಹುತ್ವದ ಪ್ರತೀಕದಂತಿದ್ದ ಭಾರತ ಇಂದು ಕೋಮುದ್ವೇಷಕ್ಕೆ ಕುಖ್ಯಾತಿ ಪಡೆದಿದೆ. ದೇಶದೊಳಗೆ ಅಲ್ಪಸಂಖ್ಯಾತರು, ದಲಿತರು, ಕ್ರಿಶ್ಚಿಯನ್ನರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಅಸಹಿಷ್ಣುತೆ ತಾಂಡವವಾಡುತ್ತಿದೆ. ಬ್ರಿಟಿಷ್ ದೈನಿಕ ‘ದಿ ಗಾರ್ಡಿಯನ್’ ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿ, ಭಾರತದ ಅಲ್ಪಸಂಖ್ಯಾತರ ಮೇಲೆ ಹಿಂದುತ್ವ ಗೂಂಡಾಗಳು ನಡೆಸುತ್ತಿರುವ ಹಿಂಸೆಯನ್ನು ತೀವ್ರವಾಗಿ ಖಂಡಿಸಿದೆ. ವಿಶೇಷವಾಗಿ ಕ್ರಿಶ್ಚಿಯನ್ನರನ್ನು ಮತಾಂತರದ ಹೆಸರಿನಲ್ಲಿ, ಮುಸ್ಲಿಮರನ್ನು ‘ಮುಸ್ಲಿಮರು ಎಂಬ ಏಕೈಕ ಕಾರಣ’ಕ್ಕಾಗಿ ದೌರ್ಜನ್ಯಕ್ಕೊಳಪಡಿಸುತ್ತಿರುವುದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರೀ ಚರ್ಚೆಗೀಡಾಗುತ್ತಿವೆ.

ಹಲವು ಜಾಗತಿಕ ಸಂಸ್ಥೆಗಳು, ಸಂಘಟನೆಗಳು, ವೇದಿಕೆಗಳು ಭಾರತದ ಅಲ್ಪಸಂಖ್ಯಾತರ ಪರವಾಗಿ ಧ್ವನಿ ಎತ್ತಿ, ಭಾರತ ಸರಕಾರದ ಮೌನವನ್ನು ಪ್ರಶ್ನಿಸಿವೆ. ಒಮಾನ್, ಕತಾರ್, ಸೌದಿ ಅರೇಬಿಯಾ ಮುಂತಾದ ಗಲ್ಫ್ ದೇಶಗಳು, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ಪಾಶ್ಚಾತ್ಯ ರಾಷ್ಟ್ರಗಳು ಭಾರತದ ಕೋಮುವಾದಿ ದೃಷ್ಟಿಕೋನವನ್ನು ಟೀಕಿಸಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಭೇಟಿಯ ವೇಳೆಯಲ್ಲೂ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಂದ ಪ್ರಜಾಪ್ರಭುತ್ವದ ಪಾಠ ಕೇಳಿಸಿಕೊಳ್ಳಬೇಕಾದ ಸ್ಥಿತಿ ಬಂದಿರುವುದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಆದ ಹಿನ್ನಡೆಯೆಂದೇ ಪರಿಗಣಿಸಬೇಕಾಗಿದೆ. ಜಗತ್ತಿನ ಮುಂದೆ ಭಾರತ ತಲೆತಗ್ಗಿಸಿ ನಿಲ್ಲಬೇಕಾದ ಪರಿಸ್ಥಿತಿ ಒಡ್ಡಿದ ಹಿಂದುತ್ವ ಪ್ರತಿಪಾದಕರಿಗೆ ಈ ಬಗ್ಗೆ ಯಾವುದೇ ವಿಷಾದ ಇರಲಾರದು. ಆದರೆ ಇದು ನೈಜ ಭಾರತೀಯರಿಗೆ ನಿಜಕ್ಕೂ ಅವಮಾನದ ವಿಚಾರ.


ತನ್ನದೇ ನೆಲದ ನಿವಾಸಿಗಳನ್ನು ಧರ್ಮದ ಹೆಸರಿನಲ್ಲಿ, ಪ್ರಭುತ್ವದ ವಿರುದ್ಧ ಇದ್ದಾರೆ ಎಂಬ ಕಾರಣಕ್ಕೆ ಸರ್ಕಾರಿ ಯಂತ್ರಗಳನ್ನು ಬಳಸಿ ಅವರನ್ನು ನಿರ್ದಯವಾಗಿ ಹತ್ತಿಕ್ಕುವ, ವಾಹನ ಹರಿಸಿ ಹತ್ಯೆ ಮಾಡುವ ಕೃತ್ಯಗಳು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಿರಂತರವಾಗಿ ನಡೆಯುತ್ತಿವೆ. ಅಸ್ಸಾಮ್ ನಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬ ನೆಪ ಮುಂದಿಟ್ಟು ಹಲವು ವರ್ಷಗಳಿಂದ ವಾಸಿಸುತ್ತಿದ್ದ ನೆಲದಿಂದ ಅಮಾನುಷವಾಗಿ ಹೊರದಬ್ಬಿದ ಘಟನೆಗೆ ದೇಶ ಮಾತ್ರವಲ್ಲ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಇತ್ತ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ರೈತರನ್ನು ಇನ್ನಿಲ್ಲದಂತೆ ಮಾಡಿದ ದೃಶ್ಯಗಳು ಅತ್ಯಂತ ಭಯಾನಕವಾಗಿವೆ. ಇವೆಲ್ಲವೂ ಭಾರತ ಎತ್ತ ಸಾಗುತ್ತಿದೆ ಎಂಬುದರ ದ್ಯೋತಕವಾಗಿದೆ. ಇವೆಲ್ಲವೂ ಪ್ರಧಾನಿ ಮೋದಿ ಆಗಾಗ ಹೇಳುತ್ತಿರುವ ‘ನ್ಯೂ ಇಂಡಿಯಾ’ದ ಪರಿಕಲ್ಪನೆಯೇ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕಾಗಿದೆ.


ಉತ್ತರ ಭಾರತದಲ್ಲಿ ಹಿಂದುತ್ವ ಗೂಂಡಾಗಳಿಂದ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ಹಿಂಸಾ ಪ್ರವೃತ್ತಿಗಳು, ದೌರ್ಜನ್ಯಗಳು ದಕ್ಷಿಣ ಭಾರತಕ್ಕೂ ಕಾಲಿಟ್ಟಿವೆ. ನೈತಿಕ ಪೊಲೀಸ್ ಗಿರಿ, ಗೋ ಹತ್ಯೆ ಹೆಸರಿನಲ್ಲಿ ಹಲ್ಲೆ, ಲೂಟಿ, ಕ್ರೈಸ್ತ, ಮುಸ್ಲಿಮರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಇಲ್ಲಿಯೂ ವ್ಯಾಪಕವಾಗಿವೆ. ಇವೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಗುಪ್ತ ಅಜೆಂಡಾ ಜಾರಿಯ ಭಾಗವಾಗಿದೆ ಎಂದರೆ ತಪ್ಪಾಗಲಾರದು. ಸ್ಥಳೀಯ ಜನಪ್ರತಿನಿಧಿಗಳು ಕೂಡ ಇದೇ ಸಂಘಪರಿವಾರದಿಂದ ಬಂದವರಾಗಿರುವುದರಿಂದ ಪೊಲೀಸರ ಮೇಲೆ ಪ್ರಭಾವ ಬೀರಿ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಹಲವು ಪ್ರಕರಣಗಳಲ್ಲಿ ಇವು ಸಾಬೀತಾಗಿವೆ. ಗಂಗೊಳ್ಳಿಯಲ್ಲಿ ಪ್ರವಾದಿಯವರ ಮೇಲೆ ನಡೆದ ನಿಂದನೆ, ಕಾರ್ಕಳದಲ್ಲಿ ನಡೆದ ಚರ್ಚ್ ದಾಳಿ, ಮಂಗಳೂರಿನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ, ಆಝಾನ್ ನಿಲ್ಲಿಸಲು ಬಹಿರಂಗ ಬೆದರಿಕೆ ಇವೆಲ್ಲವೂ ವ್ಯವಸ್ಥಿತ ಷಡ್ಯಂತರದ ಭಾಗವೇ ಆಗಿವೆ. ಚುನಾವಣೆ ಸಮೀಪಿಸುತ್ತಿರುವಾಗ ಅಥವಾ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿರುವುದು ಕಂಡುಬಂದಾಗ ಇಂತಹ ಘಟನೆಗಳು ಸಾಮಾನ್ಯವೆಂಬಂತಾಗಿದೆ. ಕೋಮುಗಲಭೆಗೆ ಹಪಹಪಿಸುತ್ತಿರುವ ಶಕ್ತಿಗಳು ಇಂತಹ ದಾಳಗಳನ್ನು ಹರಿಯಬಿಟ್ಟು ಗಲಭೆಗೆ ಪ್ರಚೋದನೆ ನೀಡುತ್ತವೆ. ಆದರೆ ಕಾನೂನಿನ ಪ್ರಕಾರ ಕೆಲಸ ಮಾಡಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಕೂಡ ಹಿಂದುತ್ವ ಶಕ್ತಿಗಳೊಂದಿಗೆ ಸೇರಿ ಅವರ ಅಜೆಂಡಾ ಜಾರಿಗೆ ಸಹಕರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.


ಸರ್ಕಾರದ ಇಂತಹ ದುರಾಡಳಿತದ ವಿರುದ್ಧ ಜನಸಾಮಾನ್ಯರು ಧ್ವನಿ ಎತ್ತಬೇಕಾದ ಸಂದರ್ಭ ಬಂದಿದೆ. ಪ್ರಜಾಪ್ರಭುತ್ವದಲ್ಲಿ ಜಾತ್ಯತೀತ ಸಿದ್ಧಾಂತದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಎಲ್ಲರೂ ಫ್ಯಾಶಿಸ್ಟ್ ಸರ್ಕಾರದ ವಿರುದ್ಧ ದೃಢ ಹೋರಾಟ ಹಮ್ಮಿಕೊಂಡು ಭಾರತವನ್ನು ಹಿಂದುತ್ವದ ಕಪಿಮುಷ್ಟಿಯಿಂದ ರಕ್ಷಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.

Join Whatsapp
Exit mobile version