Home ಟಾಪ್ ಸುದ್ದಿಗಳು ಪಂಚಾಯತ್ ರಾಜ್ ವ್ಯವಸ್ಥೆ ಸಮರ್ಪಕ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ: ಮಣಿಶಂಕರ್ ಅಯ್ಯರ್

ಪಂಚಾಯತ್ ರಾಜ್ ವ್ಯವಸ್ಥೆ ಸಮರ್ಪಕ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ: ಮಣಿಶಂಕರ್ ಅಯ್ಯರ್

ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ಪಂಚಾಯತ್ ಪರಿಷತ್ ಬಹಳ ಸಕ್ರಿಯವಾಗಿರುವ ಕಾರಣ ರಾಜ್ಯದಲ್ಲಿ ಅತ್ಯುತ್ತಮ ಪಂಚಾಯತ್ ವಿಭಾಗವನ್ನು ಹೊಂದಿದೆ. ಈ ವ್ಯವಸ್ಥೆ ಪರಿಣಾಮಕಾರಿ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಯಾವ ಸ್ಥಿತಿಯಲ್ಲಿದೆ. ಈ ವ್ಯವಸ್ಥೆಯನ್ನು ಕಾಂಗ್ರೆಸ್ ನಾಯಕರು ಹೇಗೆ ಬಳಸಿಕೊಳ್ಳಬಹುದು, ಈ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಸಿಗುವ ಹಕ್ಕು, ಸವಲತ್ತುಗಳನ್ನು ಅವರಿಗೆ ತಿಳಿಸುವುದು, ಇದನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಹಾಗೂ ಜನರ ಸಮಸ್ಯೆಗಳು ಅಥವಾ ಅಭಿಪ್ರಾಯ ಏನು ಎಂದು ಚರ್ಚೆ ಮಾಡಲು ಈ ಸಭೆ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಹರಿಕಾರ ಎಂದರೆ ಅಬ್ದುಲ್ ನಜೀರ್ ಅವರು. ಅವರಿಂದ ಪ್ರೇರಣೆ ಪಡೆದ ರಾಜೀವ್ ಗಾಂಧಿ ಅವರು ನಂತರ ಈ ವಿಚಾರವಾಗಿ ಸಂವಿಧಾನಿಕ ತಿದ್ದುಪಡಿ ತಂದರು. ಇನ್ನು ಇತ್ತೀಚೆಗೆ ರಮೇಶ್ ಕುಮಾರ್ ಅವರ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೆಲವು ಕಾನೂನು ಬದಲಾವಣೆಗಳನ್ನು ತರಲಾಗಿತ್ತು. ಉಳಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಇಷ್ಟು ಪ್ರಮಾಣದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿ ಸಮಯದಲ್ಲಿನ ವಿಚಾರಗಳನ್ನು ಸರಿಯಾಗಿ ಪರಿಶೀಲನೆ ನಡೆಸಿಲ್ಲ. ಇದು ದೇಶದಲ್ಲೇ ಅತ್ಯಂತ ಅತ್ಯುತ್ತಮ ಪಂಚಾಯತ್ ರಾಜ್ ಕಾನೂನು ಆಗಿದೆ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಹೇಳಿದರು.


ಈ ಕಾನೂನುನ್ನು ತ್ವರಿತವಾಗಿ ಜಾರಿಗೊಳಿಸದ ಕಾರಣ ಕಾಂಗ್ರೆಸ್ ಹೊರತಾದ ಸರ್ಕಾರಗಳು ಅಧಿಕಾರಕ್ಕೆ ಬಂದಾಗ, ಈ ಕಾನೂನಿನ ಘನತೆಯನ್ನು ಅರಿಯದೇ ನಿರ್ಲಕ್ಷಿಸಲಾಗಿದೆ. ನನ್ನ ಪ್ರಕಾರ ರಾಜ್ಯದಲ್ಲಿ ಕರ್ನಾಟಕ ಪಂಚಾಯತ್ ಪರಿಷತ್ ಬಹಳ ಸಕ್ರಿಯವಾಗಿರುವ ಕಾರಣ ರಾಜ್ಯದಲ್ಲಿ ಅತ್ಯುತ್ತಮ ಪಂಚಾಯತ್ ವಿಭಾಗವನ್ನು ಹೊಂದಿದೆ. ಈ ವ್ಯವಸ್ಥೆ ಪರಿಣಾಮಕಾರಿ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ ಎಂದು ಹೇಳಿದರು.


ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿದ ನಂತರ ದೇಶದಾದ್ಯಂತ ಈ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಕೆಲವು ಭಾಗಗಳಲ್ಲಿ ಗಣನೀಯ ಸುಧಾರಣೆ ಕಂಡರೆ ಮತ್ತೆ ಕಲವು ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಸುಧಾರಣೆ ಕಂಡಿದೆ. 1993 ಹಾಗೂ ಅದಕ್ಕೂ ಮುನ್ನ ಪಂಚಾಯತ್ ರಾಜ್ ವ್ಯವಸ್ಥೆಗೂ, ಈಗಿನ ವ್ಯವಸ್ಥೆಗೂ ಭೂಮಿ ಆಕಾಶದೆತ್ತರದಷ್ಟು ವ್ಯತ್ಯಾಸವಿದೆ. ರಾಜೀವ್ ಗಾಂಧಿ ಅವರು ಸಂವಿಧಾನ ತಿದ್ದು ಪಡಿ ತರುವ ಮೂಲಕ ಈ ವ್ಯವಸ್ಥೆಗೆ ಸಂವಿಧಾನಿಕ ಪಾವಿತ್ರ್ಯತೆ ತಂದುಕೊಟ್ಟರು. ಹೀಗಾಗಿ ಈ ವ್ಯವಸ್ಥೆಯನ್ನು ಕುಗ್ಗಿಸಬಹುದೇ ಹೊರತು ನಿರ್ಣಾಮ ಮಾಡಲು ಸಾಧ್ಯವಿಲ್ಲ ಎಂದು ರವಿಶಂಕರ್ ಹೇಳಿದರು.
ಈಗಲೂ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಿಗದಿತ ಸಮಯಕ್ಕೆ ನಡೆಸುತ್ತಿಲ್ಲ. ಆದರೆ ನ್ಯಾಯಾಂಗ, ಶಾಸಕಾಂಗಗಳು ಈ ಚುನಾವಣೆಯನ್ನು ನಡೆಸಲು ಆಗ್ರಹಿಸಿ ಸರ್ಕಾರವನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುತ್ತಿವೆ. ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ದೇಶ ಅತಿದೊಡ್ಡ ಸಾಧನೆಯೊಂದನ್ನು ಮಾಡಿದೆ. ಅದೇನೆಂದರೆ, ಈ ವ್ಯವಸ್ಥೆಯಲ್ಲಿ 40 ಲಕ್ಷ ಮಹಿಳೆಯರು ಪಂಚಾಯತ್ ನಲ್ಲಿ ಜನಪ್ರತಿನಿಧಿಗಳಾಗಿದ್ದಾರೆ. ವಿಶ್ವದ ಇತರೆ ಭಾಗಗಳಲ್ಲಿನ ಒಟ್ಟಾರೆ ಮಹಿಳಾ ಜನಪ್ರತಿನಿಧಿಗಳಿಗಿಂತ ಭಾರತದಲ್ಲಿ ಹೆಚ್ಚಿನ ಮಹಿಳಾ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ. ಇದು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗಬೇಕು ಎಂದು ಅವರು ಹೇಳಿದರು.


ಮಾಧ್ಯಮಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸಿ. ನಾರಾಯಣ ಸ್ವಾಮಿ ಅವರು ಉಪಸ್ಥಿತರಿದ್ದರು.

Join Whatsapp
Exit mobile version