Home ಮಲೆನಾಡು ಮಡಿಕೇರಿಯಲ್ಲಿ ಬಿಜೆಪಿಯ ಗೂಂಡಾ ವರ್ತನೆ, ಪೊಲೀಸ್ ವೈಫಲ್ಯ: ಎಸ್.ಡಿ.ಪಿ.ಐ ಖಂಡನೆ

ಮಡಿಕೇರಿಯಲ್ಲಿ ಬಿಜೆಪಿಯ ಗೂಂಡಾ ವರ್ತನೆ, ಪೊಲೀಸ್ ವೈಫಲ್ಯ: ಎಸ್.ಡಿ.ಪಿ.ಐ ಖಂಡನೆ

ಮಡಿಕೇರಿ: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸರ ಮುಂದೆಯೇ ಬಿಜೆಪಿ ಕಾರ್ಯಕರ್ತರು ಬೀದಿ ರೌಡಿಗಳಂತೆ ಗೂಂಡಾ ವರ್ತನೆ ತೋರಿದ್ದಾರೆಂದು ಎಸ್.ಡಿ.ಪಿ.ಐ ಪಕ್ಷ ಆರೋಪಿಸಿದ್ದು, ಪೊಲೀಸರ ಮುಂದೆಯೇ ಇಂತಹ ಘಟನೆ ನಡೆದಿರುವುದನ್ನು ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾಧ್ಯಕ್ಷ ಕಲೀಲ್ ಮಡಿಕೇರಿ ಖಂಡಿಸಿದ್ದಾರೆ.

ವಿರೋಧ ಮಾಡಲು ಹಾಗೂ ಪ್ರತಿಭಟಿಸಲು ಕಾನೂನಿನಲ್ಲಿ ಹಲವು ರೀತಿಯ ಅವಕಾಶಗಳಿದ್ದರೂ ಪ್ರತಿಭಟನೆಯ ನೆಪದಲ್ಲಿ ಗೂಂಡಾಗಿರಿ ಮಾಡಿರುವವರ ಮೇಲೆ ಪೊಲೀಸರು ಕೂಡಲೇ ಕ್ರಮ ಕೈಗೊಂಡು ಬಂಧಿಸಬೇಕೆಂದು ಒತ್ತಾಯಿಸಿದರು.

ಮಾಜಿ ಮುಖ್ಯಂಮತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಿಗೆ ಅದರದೇ ಆದ ಸ್ಥಾನದ ಗೌರವವಿದೆ. ಅದು ಯಾವುದೇ ಪಕ್ಷ ಇರಲಿ‌, ರಾಜಕೀಯ ವಿರೋಧದ ನಡುವೆಯೂ ಈ ಘಟನೆಯನ್ನು ಪಕ್ಷ ಖಂಡಿಸುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಕೂತಿರುವ ಕಾರಿನೊಳಗೆ ಸಾವರ್ಕರ್ ಫೋಟೋ ಹಾಕಿದಾಗಲೇ ಕಾಂಗ್ರೆಸ್ ವಿರೋಧ ಮಾಡಬೇಕಿತ್ತು. ಪರಿಣಾಮ ಅದರ ಮುಂದುವರಿದ ಭಾಗವಾಗಿ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದಲ್ಲದೆ ಸಾರ್ವಜನಿಕವಾಗಿ ಅತ್ಯಂತ ಕೆಟ್ಟ ಪದಗಳಿಂದ ಬೈದಿದ್ದಾರೆ. ಇದು ಬಿಜೆಪಿಯ ಪಕ್ಷದ ಸಂಸ್ಕೃತಿಯಾಗಿದೆ. ಬಿಜೆಪಿ ಜೊತೆಗಿನ ಕೊಡಗು ಕಾಂಗ್ರೆಸ್ಸಿನ ಮೃದು ಧೋರಣೆಯೇ ಇದಕ್ಕೆಲ್ಲಾ ಕಾರಣ ಆರೋಪಿಸಿದರು.

ಜಿಲ್ಲೆಯಲ್ಲಿ ಮಳೆ ಹಾನಿಯಿಂದ ನಾಶ ನಷ್ಟ ಅನುಭವಿಸಿದವರಿಗೆ ಇದುವರೆಗೂ ಸರಿಯಾದ ಪರಿಹಾರವನ್ನು ನೀಡಿಲ್ಲ. ಜಿಲ್ಲಾಧಿಕಾರಿ ತಡೆಗೋಡೆ ಕಾಮಗಾರಿಯಲ್ಲಿ ಕಮಿಷನ್ ಪಡೆದಿರುವ ಬಗ್ಗೆ ಜಿಲ್ಲೆಯ ಸಂಸದರ ಹಾಗೂ ಶಾಸಕರ ಮೇಲೆ ಗಂಭೀರವಾದ ಆರೋಪ ಇರುವುದರಿಂದ ಈ ರೀತಿಯ ಗೂಂಡಾ ವರ್ತನೆ ಮಾಡಿದ್ದರೆಂದು ಕಲೀಲ್ ಆರೋಪಿಸಿದರು.

Join Whatsapp
Exit mobile version