ಮಂಡ್ಯ: ಎಚ್ ಡಿ ಕುಮಾರಸ್ವಾಮಿ ಸಿಎಂ ಆದರೆ 2 ಸಾವಿರ ಅಲ್ಲ, 5 ಸಾವಿರ ಕೊಡುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಪ್ರತಿಯಾಗಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 5,000 ರೂ. ಪರಿಹಾರ ನೀಡುವುದಾಗಿ ನಿಖಿಲ್ ಘೋಷಿಸಿದರು. “ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, 2,000 ರೂ. ಅಲ್ಲ, 5,000 ರೂ. ಕೊಡುತ್ತೇವೆ. ರಾಜ್ಯ ಸರ್ಕಾರದ ಅಭಿವೃದ್ಧಿಗೆ ಯಾವುದೇ ಅಡ್ಡಿಯಾಗದಂತೆ ಈ ಯೋಜನೆಯನ್ನು ಜಾರಿಗೊಳಿಸುತ್ತೇವೆ,” ಎಂದು ಭರವಸೆ ನೀಡಿದರು.
2018ರಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕುಸಿಯಲು ಸಿದ್ದರಾಮಯ್ಯನವರೇ ಕಾರಣ ಎಂದು ನಿಖಿಲ್ ಆರೋಪಿಸಿದರು. “ನಿಮ್ಮದೇ ಪಕ್ಷದ ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದು ಯಾರು? ಅದರ ಸೂತ್ರದಾರರು ನೀವೇ ಎಂದು ಎಲ್ಲರಿಗೂ ಗೊತ್ತಿದೆ. ಇದು ನಿಮಗೆ ಮಾತೃಪಕ್ಷವಾದರೂ, ನೀವು ಮಾತೃಪಕ್ಷಕ್ಕೆ ಮೋಸ ಮಾಡಿದ್ದೀರಿ. ಇದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ,” ಎಂದು ತೀವ್ರವಾಗಿ ಖಂಡಿಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರವು DNAಯಂತೆ ಇದೆ ಎಂದು ಜೆಡಿಎಸ್ ಟ್ವಿಟರ್ ಖಾತೆಯಲ್ಲಿ ಆರೋಪಿಸಲಾಗಿತ್ತು. ಈ ವಿಷಯವನ್ನು ಉಲ್ಲೇಖಿಸಿದ ನಿಖಿಲ್, “ವಸತಿ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಣ ಕೊಟ್ಟವರಿಗಷ್ಟೇ ಮನೆ ಮಂಜೂರು ಮಾಡುತ್ತಾರೆ ಎಂದು ಸ್ವಪಕ್ಷದ ಶಾಸಕ ಬಿ.ಆರ್. ಪಾಟೀಲ್ ಅವರೇ ಬಹಿರಂಗವಾಗಿ ಹೇಳಿದ್ದಾರೆ,” ಎಂದು ಆರೋಪಿಸಿದರು.
