Home ಟಾಪ್ ಸುದ್ದಿಗಳು ಮರಣ ದಂಡನೆಗೆ ಗುರಿಯಾಗಿದ್ದ ಕುಲಭೂಷಣ್‌ ಜಾದವ್‌ ಗೆ ಮೇಲ್ಮನವಿಗೆ ಅವಕಾಶ ನೀಡುವ ಮಸೂದೆಗೆ ಪಾಕ್‌ ಸಂಸತ್‌...

ಮರಣ ದಂಡನೆಗೆ ಗುರಿಯಾಗಿದ್ದ ಕುಲಭೂಷಣ್‌ ಜಾದವ್‌ ಗೆ ಮೇಲ್ಮನವಿಗೆ ಅವಕಾಶ ನೀಡುವ ಮಸೂದೆಗೆ ಪಾಕ್‌ ಸಂಸತ್‌ ಅನುಮೋದನೆ

ಇಸ್ಲಾಮಾಬಾದ್‌ : ಪಾಕಿಸ್ತಾನದಲ್ಲಿ ಮರಣ ದಂಡನೆ ಘೋಷಿಸಲ್ಪಟ್ಟಿರುವ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಪಾಕಿಸ್ತಾನ ಸಂಸತ್‌ ಅನುಮೋದನೆ ನೀಡಿದೆ.

ಐಸಿಜೆ (ಮರುಪರಿಶೀಲನೆ ಹಾಗೂ ಮರುಪರಿಗಣನೆ) ಮಸೂದೆ ೨೦೨೦ಕ್ಕೆ ಗುರುವಾರ ಸಂಸತ್‌ ಅನುಮೋದನೆ ನೀಡಿದೆ ಎಂದು ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ. ಈ ಮಸೂದೆ ಮಂಜೂರಾಗಿರುವುದರಿಂದ, ಈಗ ಕುಲಭೂಷಣ್‌ ಗೆ ಭಾರತದ ಧೂತಾವಾಸ ಕಚೇರಿಯ ಸಂಪರ್ಕ, ನೆರವು ನೀಡಲು ಸಾಧ್ಯವಾಗಲಿದೆ.

ಗೂಡಾಚಾರಿಕೆ ನಡೆಸಿದ ಹಾಗೂ ವಿಧ್ವಂಸ ಕೃತ್ಯಕ್ಕೆ ಯತ್ನಿಸಿದ ಆರೋಪದಡಿ ಬಂಧಿತರಾಗಿರುವ ಕುಲಭೂಷಣ್‌ ಗೆ ಅಲ್ಲಿನ ಸೇನಾ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.

ಪಾಕಿಸ್ತಾನ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್‌ ಮೆಟ್ಟಿಲೇರಿತ್ತು. ಕುಲಭೂಷಣ್‌ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನ ಭಾರತ ಪ್ರಶ್ನಿಸಿತ್ತು ಮತ್ತು ಅವರಿಗೆ ಧೂತಾವಾಸ ಕಚೇರಿ ಸಂಪರ್ಕ ಮಾಡಲು ಅವಕಾಶ ಕೊಟ್ಟಿಲ್ಲ ಎಂದು ವಾದಿಸಿತ್ತು. ಹೀಗಾಗಿ ಅರ್ಜಿಯ ವಿಚಾರಣೆ ನಡೆಸಿದ್ದ ಅಂತಾರಾಷ್ಟ್ರೀಯ ಕೋರ್ಟ್‌, ಕುಲಭೂಷಣ್‌ ಅವರಿಗೆ ಧೂತಾವಾಸ ಕಚೇರಿಯ ನೆರವು ಒದಗಿಸಬೇಕು, ಶಿಕ್ಷೆಯ ಮರುಪರಿಶೀಲನೆ ಮಾಡಬೇಕು ಎಂದು ಆದೇಶಿಸಿತ್ತು.  

Join Whatsapp
Exit mobile version