ಮಂಗಳೂರು: ಮಂಗಳೂರಿನಲ್ಲಿ ನೂರಾರು ಗಿಗ್ ಕಾರ್ಮಿಕರಾಗಿ ವೃತ್ತಿಯಲ್ಲಿದ್ದು, ಮಳೆ ಗಾಳಿ ಬಿಸಿಲು ಇತ್ಯಾದಿ ಹವಾಮಾನ ವೈಫರೀತದ ಸಂದರ್ಭದಲ್ಲಿ ಯಾವುದನ್ನು ಲೆಕ್ಕಿಸದೆ ನಿಷ್ಠೆಯಿಂದ ವಿವಿಧ ಅಪಾಯವನ್ನೆದುರಿಸಿ ದ್ವಿಚಕ್ರ ವಾಹನದಲ್ಲಿ ಸಮಯಕ್ಕೆ ಸರಿಯಾಗಿ ಫುಡ್ ಡೆಲಿವೆರಿ ನಡೆಸುತ್ತಿದ್ದಾರೆ. ಆದರೆ ಈ ಗಿಗ್ ಕಾರ್ಮಿಕರನ್ನು ಕಂಪನಿಗಳು ನಡೆಸುತ್ತಿರುವ ರೀತಿ ಮಾತ್ರ ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ. ದಿನನಿತ್ಯ ವಿವಿಧ ಸಂಕಷ್ಟಗಳನ್ನು ಅವರು ಕಂಪನಿಗಳಿಂದ ಎದುರಿಸುತ್ತಿದ್ದಾರೆ ಎಂದು SDTU ರಾಜ್ಯ ಪ್ರಧಾನ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿವಿಧ ರೆಸ್ಟೋರೆಂಟ್, ಹೋಟೆಲ್ ಇತ್ಯಾದಿಗಳಿಂದ ಆನ್ ಲೈನ್ ಮೂಲಕ ಆಹಾರ ಪದಾರ್ಥಗಳನ್ನು ಬುಕ್ ಮಾಡಿ ಖರೀದಿಸುವ ಜನರ ಸಂಖ್ಯೆ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ. ದೈನಂದಿನ ಬಿಡುವಿಲ್ಲದ ಕೆಲಸದ ಒತ್ತಡಗಳು, ಸುಲಭವಾಗಿ ಕೈಗೆಟಕುವ ವ್ಯವಸ್ಥೆಗಳು ಇತ್ಯಾದಿ ಕಾರಣಗಳಿಂದ ಬಹುತೇಕ ನಗರವಾಸಿಗಳು ಹಸಿವು ನೀಗಿಸಲು ಆನ್ ಲೈನ್ ಫುಡ್ ಡೆಲಿವೆರಿಗಳನ್ನು ಅವಲಂಬಿಸಿದ್ದಾರೆ. ಇದಕ್ಕಾಗಿ ಮಂಗಳೂರು ನಗರದಲ್ಲಿ ಸ್ವಿಗ್ಗಿ, ಝೋಮ್ಯಾಟೋ, ರಾಫಿಡೋ, ಬ್ಲೈಂಕೆಟ್ ಕಂಪನಿಗಳು ಡೆಲಿವೆರಿ ಬಾಯ್ ಯನ್ನು ನೇಮಿಸುತ್ತದೆ. ಇವರನ್ನು ಗಿಗ್ ಕಾರ್ಮಿಕರು ಎಂದು ಕರೆಯುತ್ತಾರೆ. ತನ್ನ ಕುಟುಂಬವನ್ನು ಸಲಹುವ ಗುರಿಯನ್ನಿಟ್ಟು ಕೊನೆಯದಾಗಿ ಆಯ್ಕೆ ಮಾಡುವ ವೃತ್ತಿಯಾಗಿದೆ ಡೆಲಿವೆರಿ ಬಾಯ್ ಎಂದರು.
ಗಿಗ್ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಈ ಕೆಳಗಿನವುಗಳು:
– 2016 ರಿಂದ food ಡೆಲಿವೆರಿ ಮಾಡುವ ಗಿಗ್ ಕಾರ್ಮಿಕರಿಗಾಗಿ ನಿಗದಿಯಾದ ದರ 2025 ರಲ್ಲಿ ಅದೇ ದರ ಚಾಲ್ತಿಯಲ್ಲಿದೆ 2018 ರಲ್ಲಿ ಪೆಟ್ರೋಲ್ ಗೆ 70.21 ರೂಪಾಯಿಯಾದರೆ 2025 ರಲ್ಲಿ 102.92 ರೂಪಾಯಿ ಆದರೆ ಇಂದಿಗೂ ಕಂಪನಿಗಳು ಗಿಗ್ ಕಾರ್ಮಿಕರಿಗೆ 2018ರಲ್ಲಿ ನೀಡುವ ಕಮಿಷನನ್ನೇ ನೀಡುತ್ತಿದೆ.
– ಒಂದು ದಿನಕ್ಕೆ 10 ಗಂಟೆಗಳ ಡ್ಯೂಟಿ ಹಾಗೂ ಇಂತಿಷ್ಟು ಆರ್ಡರ್ಗಳನ್ನು ಡೆಲಿವೆರಿ ಮಾಡಿದರೆ ಇಂಸೆಂಟಿವ್ (ಹೆಚ್ಚುವರಿ ಮೊತ್ತ )ಕೊಡಲಾಗುವುದು. ಕೆಲವೊಮ್ಮೆ ಇಂಸೆಂಟಿವ್ ಪೂರ್ತಿಗೋಳಿಸಲು ಆರ್ಡರ್ ಗಳಿಗೆ ರಾತ್ರಿ 11 ಗೆಂಟೆಯವರೆಗೂ ಕಾಯುವಂತ ಪರಿಸ್ಥಿತಿ ಕಂಪನಿ ಮಾಡುತ್ತಿದೆ. ಈ ಸಂದರ್ಭದಲ್ಲಿ ಗಿಗ್ ಕಾರ್ಮಿಕರ ವೃತ್ತಿಯ ಸಮಯ 10ಗೆಂಟೆಗೂ ಮೀರುತ್ತದೆ
– ಕೆಲಸದ ಸಮಯ 10ಗೆಂಟೆ ಮೀರಿದರೂ ಕಂಪನಿಗೆ ಯಾವುದೇ ಕಾನೂನು ತೊಡಕಾಗಬಾರದು ಎಂದು ಡೆಲಿವೆರಿ ಮಾಡುವ ಗಿಗ್ ಕಾರ್ಮಿಕರನ್ನು ಕಂಪನಿ ಪಾಲುದಾರಾರೆಂದು ನೊಂದಣಿ ಮಾಡಿದೆ.
– ಟ್ರಾಫಿಕ್, ರಸ್ತೆ ಸಮಸ್ಯೆ, ವಸತಿ ಸಂಕೀರ್ಣದಲ್ಲಿರುವ ನಿಯಮಗಳು ಇತ್ಯಾದಿಗಳಿಂದ ನಿಗದಿತ ಸಮಯದೊಳಗೆ ಆಹಾರವನ್ನು ತಲುಪಿಸಲು ಅಸಾಧ್ಯವಾದರೆ, ಇದರ ನಷ್ಟ ಗಿಗ್ ಕಾರ್ಮಿಕರ ಮೇಲೆಯಾಗಿದೆ.
– ಗಿಗ್ ಕಾರ್ಮಿಕರನ್ನು ನಿರ್ವಹಣೆ ನಡೆಸಲು ಸ್ವಿಗ್ಗಿ ಕಂಪನಿಗೆ ಕಚೇರಿ ಇದ್ದರೆ, ಝೋಮೆಟೊ, ರಾಫಿಡೋ ಕಂಪನಿಗೆ ಕಚೇರಿಯೇ ಇಲ್ಲ. ಕೆಲಸದ ಸಮಯದಲ್ಲಿ ಏನಾದರೂ ಸಮಸ್ಯೆಯಾದರೆ ಕಂಪನಿ ಫ್ಲೀಟ್ ಕೋಚ್ ಎಂದು ನೇಮಿಸಿದರೂ ಕೆಲವೊಮ್ಮೆ ದೂರುಗಳ ಬಗ್ಗೆ ಸರಿಯಾದ ಸ್ಪಂದನೆ ಅಥವಾ ಉಡಾಫೆಯ ಉತ್ತರ ನೀಡುತ್ತಾ ನಿರ್ಲಕ್ಷ ವಹಿಸುತ್ತಾರೆ.
– ಗಿಗ್ ಕಾರ್ಮಿಕರಿಂದ ವಾರಕ್ಕೊಮ್ಮೆ TDS (ತೆರಿಗೆ) ಸಂಗ್ರಹಿಸಲಾಗುತ್ತದೆ
– ಸಮಸ್ಯೆಗಳ ಬಗ್ಗ ಫ್ಲೀಟ್ ಕೋಚ್ ರವರೊಂದಿಗೆ ನಿರಂತರವಾಗಿ ಮಾತುಕತೆಯಾದರೂ ವಿನಾ ಕಾರಣ ಗಿಗ್ ಕಾರ್ಮಿಕರ ID ಬ್ಲಾಕ್ ಮಾಡುತ್ತಾರೆ.
ಈ ಎಲ್ಲಾ ಸಮಸ್ಯೆಗಳ ಸುಳಿಯಲ್ಲಿ ಗಿಗ್ ಕಾರ್ಮಿಕರು ದಿನನಿತ್ಯ ಜೀವದ ಹಂಗು ತೊರೆದು ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾರೆ ದೈನಂದಿನ ಖರ್ಚು, ವಾಹನದ ಖರ್ಚು, ಇಂಧನ ಇತ್ಯಾದಿ ಖರ್ಚುಗಳನ್ನು ಭರಿಸಲು ದಿನದ 10ರಿಂದ 11 ಗಂಟೆಯವರೆಗೂ ಡೆಲಿವೆರಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಪ್ರಾಣ ಕಳೆದುಕೊಂಡ ಘಟನೆಯೂ ಸಂಭವಿಸಿದೆ. ಸರಕಾರ ಗಿಗ್ ಕಾರ್ಮಿಕರಿಗಾಗಿ ವಿಶೇಷ ವಿಮಾ ಸೌಲಭ್ಯವೂ ಜಾರಿ ಮಾಡಿದೆ ಆದರೆ ಗಿಗ್ ಕಾರ್ಮಿಕರಿಂದ ಕಂಪನಿಗಳು ನಡೆಸುವ ಹಗಲು ದರೋಡೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳದ ಹೊರತು ಯಾವುದೇ ವಿಮಾ ಸೌಲಭ್ಯಗಳು ಉಪಯೋಗ ಶೂನ್ಯವಾಗಿದೆ. ಜೀವಂತ ಇರುವಾಗಲೇ ಭದ್ರತೆಯ ಖಾತ್ರಿ ನೀಡದೆ ಶೋಷಣೆಗೆ ಅವಕಾಶ ನೀಡಿದರೆ ಜೀವ ಕಳೆದ ನಂತರ ಸಿಗುವ ಸೌಲಭ್ಯಗಳ ಫಲನುಭವಿಯಾಗಲು ಯಾರೂ ಇಷ್ಟ ಪಡಲಾರರು ಸರಕಾರ ತಕ್ಷಣ ಮದ್ಯ ಪ್ರವೇಶಿಸಿ ಗಿಗ್ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಪತ್ರಿಕಾಗೋಷ್ಠಿ ಮೂಲಕ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಸಂದರ್ಭ SDTU ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹಿಮಾನ್ ಬೋಳಿಯಾರ್, ಜಿಲ್ಲಾ ಕೋಶಾಧಿಕಾರಿ ನೌಫಲ್ ಕುದ್ರೋಳಿ, SDTU ಮಂಗಳೂರು, ದಕ್ಷಿಣ ಏರಿಯಾ ಅಧ್ಯಕ್ಷ ಇಕ್ಬಾಲ್ ಬಿಪಿ ಉಪಸ್ಥಿತರಿದ್ದರು.