ಮಡಿಕೇರಿ: ಇಬ್ಬರನ್ನು ಬಲಿ ಪಡೆದು ಮತ್ತೆ ಕಾಫಿ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿ ಕೊನೆಗೂ ಸೆರೆಯಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆಯಿಂದ ಕಾಫಿ ತೋಟದ ಸುತ್ತಮುತ್ತಲಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ತಾತ ಮತ್ತು ಮೊಮ್ಮಗನನ್ನು ಬಲಿಪಡೆದ ಸ್ಥಳದಿಂದ ಸ್ವಲ್ಪ ದೂರದ ನಾಣಚ್ಚಿ ಗೇಟ್ ಬಳಿ ಈ ಹುಲಿ ಸೆರೆಯಾಗಿದೆ. ಕಾಫಿ ತೋಟದಲ್ಲಿ ಕಾಣಿಸಿಕೊಂಡ ಪರಿಣಾಮ ಸ್ಥಳೀಯರಲ್ಲಿ ಭಯದ ವಾತಾವರಣ ಉಂಟಾಗಿತ್ತು. ಭಯದಿಂದ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಸಹ ಮನೆಗಳನ್ನು ಖಾಲಿ ಮಾಡಿದ್ದರು. ಹುಲಿಯನ್ನು ಸೆರೆಹಿಡಿಯುವಂತೆ ಆರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ, ಹುಲಿಗೆ ಅರವಳಿಕೆ ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಮುಂಜಾನೆಯಿಂದಲೇ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ, ಶಾರ್ಪ್ ಶೂಟರ್, ವೈದ್ಯರು ಮತ್ತು 100 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳ 8 ತಂಡ ಹುಡುಕಾಟ ಆರಂಭಿಸಿತ್ತು. ಅಲ್ಲದೇ ಅಭಿಮನ್ಯು ನೇತೃತ್ವದ 4 ಸಾಕಾನೆಗಳನ್ನು ತಂದು ಹುಲಿ ಸೆರೆಗೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಲ್ಲದೇ ಇಬ್ಬರನ್ನು ಬಲಿಪಡೆದ ಸ್ಥಳದಲ್ಲಿ ಬೋನ್ ಇಡಲಾಗಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆ ಸಕಲ ಕ್ರಮಗಳನ್ನು ಕೈಗೊಂಡಿತ್ತು.