Home ಜಾಲತಾಣದಿಂದ ಮುಸ್ಲಿಂ ವ್ಯಕ್ತಿಗೆ ಹಿಂದೂ ಪ್ರದೇಶದ ಅಂಗಡಿ ಮಾರಾಟ: ವಿರೋಧಿಸಿದವರಿಗೆ 25,000 ದಂಡ ವಿಧಿಸಿದ ಗುಜರಾತ್ ಹೈಕೋರ್ಟ್

ಮುಸ್ಲಿಂ ವ್ಯಕ್ತಿಗೆ ಹಿಂದೂ ಪ್ರದೇಶದ ಅಂಗಡಿ ಮಾರಾಟ: ವಿರೋಧಿಸಿದವರಿಗೆ 25,000 ದಂಡ ವಿಧಿಸಿದ ಗುಜರಾತ್ ಹೈಕೋರ್ಟ್

ಅಹ್ಮದಾಬಾದ್: ಹಿಂದೂ ಬಾಹುಳ್ಯದ ಪ್ರದೇಶದಲ್ಲಿದ್ದ ಅಂಗಡಿಯನ್ನು ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬ ಮುಸ್ಲಿಂ ವ್ಯಕ್ತಿಗೆ ಮಾರಾಟ ಮಾಡುವುದನ್ನು ವಿರೋಧಿಸಿದ್ದ ಹತ್ತು ಮಂದಿಗೆ ಗುಜರಾತ್‌ ಹೈಕೋರ್ಟ್‌ 25,000 ದಂಡ ವಿಧಿಸಿದೆ.

ಖರೀದಿದಾರ ಯಶಸ್ವಿಯಾಗಿ ಖರೀದಿಸಿದ ಆಸ್ತಿಯನ್ನು ಅನುಭವಿಸಲು ಬಿಡದೇ ಇರುವುದು ವಿಚಲಿತಗೊಳಿಸುವಂತಹ ಸಂಗತಿ ಎಂದು ನ್ಯಾ. ಬಿರೇನ್‌ ವೈಷ್ಣವ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

ಪ್ರಕರಣದಲ್ಲಿ ತಮ್ಮನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳುವಂತೆ ಕೋರಿದ್ದ ಅರ್ಜಿದಾರರು ಹಾಗೂ ಇತರರಿಗೆ 25,000 ದಂಡ ವಿಧಿಸುವ ವೇಳೆ ನ್ಯಾಯಾಲಯ  “ತೊಂದರೆಗೀಡಾದ ಪ್ರದೇಶದಲ್ಲಿ ಯಶಸ್ವಿಯಾಗಿ ಆಸ್ತಿಯನ್ನು ಖರೀದಿಸಿದವರ ಬೆನ್ನತ್ತಿ ಅವರು ಖರೀದಿಸಿದ ಆಸ್ತಿಯನ್ನು ಅನುಭವಿಸಲು ಬಿಡದೇ ಇರುವುದು ವಿಚಲಿತಗೊಳಿಸುವಂತಹ ಸಂಗತಿ” ಎಂದಿತು.

ವಡೋದರಾ ಜಿಲ್ಲೆಯ ಹಿಂದೂಗಳು ಹೆಚ್ಚಿರುವ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಈ ಅಂಗಡಿಯನ್ನು ಹಿಂದೂ ವ್ಯಕ್ತಿಯಿಂದ ಖರೀದಿಸಿದ್ದರು, ಖರೀದಿ ಒಪ್ಪಂದಕ್ಕೆ ಸಾಕ್ಷಿಗಳಾಗಿ 2020ರಲ್ಲಿ ಸಹಿ ಹಾಕಿದ್ದ ಅರ್ಜಿದಾರರೇ ನಂತರ ತಗಾದೆ ತೆಗೆದಿದ್ದರು. ತಮ್ಮನ್ನು ಸಹಿ ಹಾಕುವಂತೆ ಒತ್ತಾಯಿಸಲಾಗಿತ್ತು ಎಂದು ದೂರಿದ್ದರು.

ಬಹುಸಂಖ್ಯಾತ ಹಿಂದೂ ಮತ್ತು ಅಲ್ಪಸಂಖ್ಯಾತ ಮುಸ್ಲಿಮರ ನಡುವಿನ ಸಾಮರಸ್ಯದ ಮೇಲೆ ಪರಿಣಾಮ ಬೀರಬಹುದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ಆರಂಭದಲ್ಲಿ ಅಂಗಡಿ ಮಾರಾಟಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಕೂಡ ವಿರೋಧ ವ್ಯಕ್ತಪಡಿಸಿದ್ದರು.

ಆದರೆ ಈ ಆಕ್ಷೇಪಗಳನ್ನು ಮಾರ್ಚ್‌ 9, 2020ರಲ್ಲಿ ಹೈಕೋರ್ಟ್‌ ವಜಾಗೊಳಿಸಿತ್ತು. ಗುಜರಾತ್ ಸ್ಥಿರಾಸ್ತಿ ವರ್ಗಾವಣೆ ನಿಷೇಧ ಮತ್ತು ತೊಂದರೆಗೊಳಗಾದ ಪ್ರದೇಶಗಳಲ್ಲಿನ ಆವರಣದಿಂದ ಬಾಡಿಗೆದಾರರನ್ನು ಹೊರಹಾಕುವ ನಿಬಂಧನೆಗಳು-1981ರ ಅನ್ವಯ ಅಂಗಡಿ ಮಾರಾಟವಾಗಿದೆಯೇ ಎಂಬುದನ್ನು ಗಮನಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಮಾರ್ಚ್‌ 2020ರ ತೀರ್ಪಿನಂತೆ ಆಸ್ತಿ ಮಾರಾಟ ಕುರಿತಂತೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಾರಾಟ ಒಪ್ಪಂದಕ್ಕೆ ಸಹಿ ಹಾಕುವಂತೆ ತಮ್ಮನ್ನು ಒತ್ತಾಯಿಸಲಾಗಿತ್ತು  ಎಂದು ಪ್ರಕರಣದ ಅರ್ಜಿದಾರರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಮತ್ತೆ ಹೈಕೋರ್ಟ್‌ ಅಂಗಳಕ್ಕೆ ಬಂದಿತ್ತು.

ಇದಲ್ಲದೆ, ಮುಸ್ಲಿಂ ವ್ಯಕ್ತಿ ಖರೀದಿಸಿದ ಅಂಗಡಿಯ ಪಕ್ಕದಲ್ಲಿಯೇ ತಮ್ಮ ಅಂಗಡಿಗಳಿದ್ದ10ಕ್ಕೂ ಹೆಚ್ಚು ಅಂಗಡಿ ಮಾಲೀಕರ ಗುಂಪು ಮತ್ತೊಂದು ಸಿವಿಲ್ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾ. ವೈಷ್ಣವ್‌ ದಂಡದೊಂದಿಗೆ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿದರು.

(ಕೃಪೆ: ಬಾರ್ & ಬೆಂಚ್)

Join Whatsapp
Exit mobile version