ಮಲಪ್ಪುರಂ: 7 ದಿನಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಕೇರಳ ವಂದೇ ಭಾರತ್ ರೈಲಿಗೆ ಕಿಡಿಗೇಡಿಗಳು ಕಲ್ಲಿನಿಂದ ಹೊಡೆದಿದ್ದಾರೆ. ಇದರಿಂದ ಕಿಟಕಿಯ ಗಾಜುಗಳು ಜಖಂಗೊಂಡಿವೆ.
ಸೋಮವಾರ ಸಂಜೆ 5 ಗಂಟೆಗೆ ಉತ್ತರ ಕೇರಳ ಜಿಲ್ಲೆಯ ತಿರುನಾವಯ ಮತ್ತು ತಿರೂರ್ ನಡುವೆ ಹಾದು ಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ರೈಲು ಕಾಸರಗೋಡಿನಿಂದ ತಿರುವನಂತಪುರಕ್ಕೆ ಹೋಗುತ್ತಿದ್ದಾಗ ದಾಳಿ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದುಷ್ಕರ್ಮಿಗಳ ಕಲ್ಲೇಟಿಗೆ ಕಿಟಕಿಯ ಗಾಜುಗಳು ಬಿರುಕುಬಿಟ್ಟಿವೆ. ಪೊಲೀಸರಿಗೆ ದೂರು ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.