Home ಟಾಪ್ ಸುದ್ದಿಗಳು ಮಹಿಳಾ ದೌರ್ಜನ್ಯ ವಿರೋಧಿ ಮಸೂದೆ 2016 ನ್ನು ಜಾರಿಗೊಳಿಸಲು ಕರ್ನಾಟಕ ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

ಮಹಿಳಾ ದೌರ್ಜನ್ಯ ವಿರೋಧಿ ಮಸೂದೆ 2016 ನ್ನು ಜಾರಿಗೊಳಿಸಲು ಕರ್ನಾಟಕ ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

ಬೆಂಗಳೂರು: ವಿಮೆನ್ ಇಂಡಿಯಾ ಮೊಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.


ಈ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.

  1. ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ವ್ಯಾಪಕವಾಗುತ್ತಿದ್ದು, ಮಹಿಳಾ ಭದ್ರತೆಯಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಎನ್ ಸಿ ಆರ್ ಬಿ ಯ ಹೊಸ ಹೊಸ ವರದಿಯ ಪ್ರಕಾರ ಮಹಿಳೆಯರಿಗೆ ಮೂರನೇ ಅತ್ಯಂತ ಅಸುರಕ್ಷಿತ ಮೆಟ್ರೋಪಲಿಟನ್ ಸಿಟಿಯಾಗಿ ಬೆಂಗಳೂರು ಗುರುತಿಸಿರುವುದು ಖೇದಕರ. ಜೊತೆಗೆ ಗ್ರಹ ಹಿಂಸೆಯಲ್ಲೂ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜಕೀಯ ಪ್ರೇರಿತ ಮಹಿಳಾ ದೌರ್ಜನ್ಯಗಳು ಸಾರ್ವಜನಿಕ ಪ್ರದೇಶದಲ್ಲೂ ಹೆಚ್ಚಾಗುತ್ತಿರುವುದು ಖಂಡನಾರ್ಹ. ನೆರೆಹಾವಳಿ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯೊಂದಿಗೆ ವರ್ತಿಸಿದ ರೀತಿ ಮತ್ತು ಬಳಿಕ ನೀಡಿದ ಹೇಳಿಕೆ, ಉಡುಪಿಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ್ ಶೆಟ್ಟಿ ಮಹಿಳೆಗೆ ನಡೆಸಿದ ಹಲ್ಲೆ, ಡಾಕ್ಟರ್ ಸುಮತಿಯವರಿಗೆ ಸಂಭಾವ್ಯ ವಿಧಾನಸಭಾ ಅಭ್ಯರ್ಥಿಯಾಗಿದ್ದಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಕಚೇರಿಗೆ ನುಗ್ಗಿ ಕೊಲೆ ಬೆದರಿಕೆ ಹಾಕಿದ ಘಟನೆ ಇತ್ಯಾದಿ ಕೆಲವು ಉದಾಹರಣೆಗಳು ಮಾತ್ರ. ಆದ್ದರಿಂದ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಮಹಿಳಾ ದೌರ್ಜನ್ಯ ವಿರೋಧಿ ಮಸೂದೆ 2016 ನ್ನು ಜಾರಿಗೊಳಿಸಬೇಕೆಂದು ಸಭೆಯು ಒತ್ತಾಯಿಸಿದೆ.
    2 ಬೆಂಗಳೂರು ಮತ್ತು ಸುತ್ತಮುತ್ತ ಪ್ರದೇಶಗಳು ನೆರೆಹಾವಳಿಯಿಂದಾಗಿ ಸಾವಿರಾರು ಜನರು ತಮ್ಮ ಮನೆ ಮಠಗಳು, ದಾಖಲೆಗಳು, ನಗನಗದು, ಶೈಕ್ಷಣಿಕ ಸಾಧನಗಳು ಇತ್ಯಾದಿಗಳನ್ನು ಕಳೆದುಕೊಂಡು ಹೈರಾಣಾಗಿದ್ದಾರೆ. ಆಹಾರ ವಸ್ತುಗಳು, ಬಟ್ಟೆ, ಔಷದಗಳಿಲ್ಲದೆ ಜನರು ದೈನಂದಿನ ಜೀವನ ನಡೆಸಲು ಪರದಾಡುತ್ತಿದ್ದಾರೆ. ನೆರೆಯಿಂದಾಗಿ ತುಂಬಿಕೊಂಡ ನೀರು, ಕೆಸರು, ತ್ಯಾಜ್ಯಗಳಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯು ಎದುರಾಗಿದೆ. ಹಾಗಿದ್ದರೆ ಸರ್ಕಾರ ಇಲಾಖೆಗಳು ಇದನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದಾಗಿ ಸಮಸ್ಯೆಗಳು ಮುಂದುವರಿದಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ಛೀಮಾರಿ ಹಾಕಿದ್ದರೂ ಕೂಡ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ ತೋರಿರುವ ಕ್ರಮ ಖಂಡನೀಯ. ಸರಕಾರ ಸಂತ್ರಸ್ತರಿಗೆ ತಕ್ಷಣ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭೆಯು ಒತ್ತಾಯಿಸಿದೆ.
    3) ಆರ್ಥಿಕ ಕಾರಣಗಳಿಂದ ಹೆಚ್ಚುತ್ತಿರುವ ಕುಟುಂಬಗಳ ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳು:
    ನೋಟ್ ಬ್ಯಾನ್ ಜಿ.ಎಸ್.ಟಿ ನಂತರ ಕೊರೊನಾ ಅಲೆಗಳ ಅಬ್ಬರಗಳ ನಡುವೆ ಸಿಲುಕಿ ಅದೆಷ್ಟೋ ಮಂದಿ ಸಾಲದ ಸುಳಿಯಲ್ಲಿ ನರಳುತ್ತಿದ್ದಾರೆ. ಒಂದೆಡೆ ಬೆಲೆ ಏರಿಕೆ, ಇನ್ನೊಂದೆಡೆ ಗ್ಯಾಸ್ ಸಬ್ಸಿಡಿ ಸೇರಿದಂತೆ ಬಡ ಜನರಿಗೆ ತಲುಪುತ್ತಿದ್ದ ರಿಯಾಯಿತಿಗಳಲ್ಲಿ ಆಗಿರುವ ಕಡಿತ ಸಾಮಾನ್ಯ ಜನರನ್ನು ಆತ್ಮಹತ್ಯೆ ಕಡೆಗೆ ನೂಕುತ್ತಿದೆ. ನ್ಯಾಷನಲ್ ಕ್ರೈಂಸ್ ಬ್ಯೂರೋ ವರದಿಯ ಪ್ರಕಾರ 2020ರಲ್ಲಿ ಸುಮಾರು 1,53,052 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ಗಂಟೆಗೆ 17 ಕ್ಕಿಂತಲೂ ಹೆಚ್ಚು ಜನ ಭಾರತದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಂದರೆ ಪ್ರತಿದಿನ ಸುಮಾರು 416 ಕ್ಕಿಂತ ಹೆಚ್ಚು ಜನ ತಮ್ಮ ಜೀವವನ್ನು ತಾವೇ ತೆಗೆದುಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಅತಿ ಹೆಚ್ಚಿನ ಪಾಲು ಆರ್ಥಿಕ ಸಮಸ್ಯೆ ಆಗಿರುತ್ತದೆ. ಇದರಲ್ಲಿ ಇನ್ನೂ ಆಘಾತಕಾರಿ ಅಂಶ ಎಂದರೆ ಇತ್ತೀಚಿನ ದಿನಗಳಲ್ಲಿ ಕುಟುಂಬಗಳ ಸಾಮೂಹಿಕ ಆತ್ಮಹತ್ಯೆಗಳ ಪ್ರಕರಣಗಳು ಹೆಚ್ಚಾಗುತ್ತಿರುವುದು. ಜೂನ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದ 11 ಜನರು ಸಾವಿಗೆ ಶರಣಾಗಿದ್ದಾರೆ. ಅದಕ್ಕೂ ಮೊದಲು ದೆಹಲಿಯ ಒಂದೇ ಕುಟುಂಬದ 17 ಜನ ಒಟ್ಟಿಗೆ ಜೀವ ಬಿಟ್ಟಿದ್ದರು. ಇಂತಹ ಎಲ್ಲ ಪ್ರಕರಣಗಳಲ್ಲಿಯೂ ಆ ಕುಟುಂಬಗಳು ಸಾಲದ ಹೊರೆಯನ್ನು ತಡೆಯಲಾರದೆ ಈ ನಿರ್ಧಾರಕ್ಕೆ ಬಂದಿವೆ ಎಂದು ಪೊಲೀಸ್ ತನಿಖೆಗಳೇ ಹೇಳುತ್ತಿವೆ. ಒಂದೆಡೆ ಸರ್ಕಾರದ ಅವೈಜ್ಞಾನಿಕ ನೋಟ್ ಬ್ಯಾನ್, ಜಿ.ಎಸ್.ಟಿ ಜನರನ್ನು ಸಂಕಷ್ಟಕ್ಕೆ ನೂಕಿದರೆ ಇನ್ನೊಂದೆಡೆ ಕೋವಿಡ್ ಲಾಕ್ ಡೌನ್ ಜನರ ಬದುಕನ್ನೇ ಕಸಿಯಿತು. ಅದರ ಜೊತೆಗೆ ದೇಶದಲ್ಲಿ ನಿರುದ್ಯೋಗ ದರ ಕಳೆದ ನಾಲ್ಕು ದಶಕಗಳಲ್ಲಿಯೇ ಅತಿ ಹೆಚ್ಚಿರುವುದು ಜನರ ಬದುಕುವ ಭರವಸೆಯನ್ನೇ ಕಸಿಯುತ್ತಿದೆ. ಆದರೆ ಸರ್ಕಾರಗಳು ಮಾತ್ರ “ಸಬ್ ಚಂಗಾಸಿ” ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿ ಜನರನ್ನು ತಪ್ಪು ಡೇಟಾ ಮೂಲಕ ಯಾಮಾರಿಸುತ್ತ ಕೂತಿದೆ. ಈ ವಿಷಯವಾಗಿ ಸರ್ಕಾರ ಸೂಕ್ತ ಆರ್ಥಿಕ ನೀತಿಗಳ ಮೂಲಕ ಇಂತಹ ಪ್ರಕರಣಗಳು ನಡೆಯದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಸಭೆಯು ಒತ್ತಾಯಿಸಿದೆ.
    ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಸ್ವಾಗತಿಸಿ, ರಾಜ್ಯಉಪಾಧ್ಯಕ್ಷೆ ಡಾ. ಪ್ರಮೀಳಾದೇವಿ ಬಿ. ಕೆ ಧನ್ಯವಾದವಿತ್ತರು. ಉಪಾಧ್ಯಕ್ಷೆ ಶಾಝಿಯ ಬೆಂಗಳೂರು, ಕಾರ್ಯದರ್ಶಿ ಸೈದಾ ಬೇಗಂ ಬೆಂಗಳೂರು ಮತ್ತು ತನುಜಾವತಿ ಮಡಿಕೇರಿ, ರಾಜ್ಯ ಕೋಶಾಧಿಕಾರಿ ರಿಹಾನ ಗುಲ್ಬರ್ಗ ಹಾಗೂ ಇತರ ರಾಜ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Join Whatsapp
Exit mobile version