ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯಲ್ಲಿರುವ ಮಾನಸ್ಬಾಲ್ ಸರೋವರದಲ್ಲಿ ಭಾರತೀಯ ನೌಕಾ ಪಡೆಯು 33 ವರ್ಷಗಳ ಬಳಿಕ ಮತ್ತೆ ತರಬೇತಿಗಳನ್ನು ಆರಂಭಿಸಿದೆ.
ಕಾಶ್ಮೀರದ ಮಧ್ಯದಲ್ಲಿರುವ ಮಾನಸ್ಬಾಲ್ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಶನಲ್ ಕೆಡೆಟ್ ಕಾರ್ಪ್ಸ್ ನೌಕಾ ವಿಭಾಗದವರಿಗೆ ತರಬೇತಿ ನೀಡಲು ಅತ್ಯುತ್ತಮವಾದುದಾಗಿದೆ. ಭದ್ರತೆಯ ಕೊರತೆಯ ಕಾರಣಕ್ಕೆ ಇಲ್ಲಿ ತರಬೇತಿ ನೀಡುವುದನ್ನು 1989ರಲ್ಲಿ ಕೈಬಿಡಲಾಗಿತ್ತು. ಜಮ್ಮುವಿನ ಮಾನ್ಸರ್ ಸರೋವರಕ್ಕೆ ತರಬೇತಿಯನ್ನು ಬದಲಿಸಲಾಗಿತ್ತು.
ಸದ್ಯ ಭದ್ರತೆಯನ್ನು ಮತ್ತೆ ಹೆಚ್ಚಿಸಿ ಮಾನಸ್ಬಾಲ್ ಸರೋವರದಲ್ಲಿ 33 ವರ್ಷಗಳ ಬಳಿಕ ತರಬೇತಿಯನ್ನು ಆರಂಭಿಸಲಾಗುತ್ತಿದೆ.
ಮಾನ್ಸರ್ ನಿಂದ ಎರಡು ತರಬೇತಿ ಬೋಟುಗಳನ್ನು ಇಲ್ಲಿಗೆ ತರಲಾಗಿದೆ. ಮಾನಸ್ಬಾಲ್ ಅಭಿವೃದ್ಧಿ ಪ್ರಾಧಿಕಾರವು ಸರೋವರದ ಮುಂದುಗಡೆ ಅಗತ್ಯದ ಕ್ಯಾಂಪಿಂಗ್ ಸಂರಚನೆಗಳನ್ನು ಒದಗಿಸುತ್ತಿದೆ.
ಶ್ರೀನಗರ ಎನ್ ಸಿಸಿ ಗುಂಪಿನ ಬ್ರಿಗೇಡಿಯರ್ ಕೆ. ಎಸ್. ಕಾಲ್ಸಿ ಅವರು ಕಾಶ್ಮೀರ ಕಣಿವೆಯ ಎನ್ ಸಿಸಿಗೆ ಇದು ಕ್ರಾಂತಿ ದಿನ ಎಂದು ಹೇಳಿದರು.
“ಜಮ್ಮು ಮತ್ತು ಕಾಶ್ಮೀರದ ನಾನಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಹಿತ 100ಕ್ಕೂ ಹೆಚ್ಚು ಎನ್ ಸಿಸಿ ಕೆಡೆಟ್ ಗಳು ಈ ಸುಂದರ ಸ್ಥಳದಲ್ಲಿ ತರಬೇತಿಗೆ ಸಿದ್ಧವಾಗಿದ್ದಾರೆ” ಎಂದು ಕಾಲ್ಸಿ ಹೇಳಿದರು.
ದೇಶ ಕಟ್ಟುವುದರಲ್ಲಿ ಎನ್ ಸಿಸಿ ಅತಿ ಮುಖ್ಯವಾದ ಅಂಗವಾಗಿದೆ. ಯುವಕರನ್ನು ದೇಶಕ್ಕೆ ಜವಾಬ್ದಾರರಾಗಿಸುವ ಶಿಸ್ತಿನ ತರಬೇತಿ ನೀಡಲಾಗುತ್ತದೆ ಎಂದೂ ಅವರು ಹೇಳಿದರು. “ಅವರಲ್ಲಿ ಕೆಲವರಾದರೂ ಸಶಸ್ತ್ರ ಪಡೆಗೆ ಸೇರುವ ಬಗೆಯಲ್ಲೂ ಇಲ್ಲಿ ತರಬೇತಿ ಇರುತ್ತದೆ. ಮಾನಸ್ಬಾಲ್ ನಲ್ಲಿ 1965ರಲ್ಲಿ ತರಬೇತಿ ಆರಂಭವಾಗಿತ್ತು; ಭದ್ರತೆಯ ಕಾರಣಕ್ಕೆ 1989ರಲ್ಲಿ ಕೈಬಿಡಲಾಗಿತ್ತು.
“ನಾವು ಮತ್ತೆ ತರಬೇತಿ ಆರಂಭಿಸುವ ಮೂಲಕ ಸರೋವರವನ್ನು ಮತ್ತೆ ಮತ್ತೆ ಚಟುವಟಿಕೆಯದಾಗಿ ಮಾಡುತ್ತೇವೆ” ಎಂದು ಕಾಲ್ಸಿ ತಿಳಿಸಿದರು.
ಬೋಟು ಎಳೆಯುವುದು, ಬೋಟು ನಡೆಸುವುದು, ಸಿಗ್ನಲ್ ಗಳನ್ನು ನೀಡುವುದು, ಹಡಗು ಮಾದರಿ ತಯಾರಿ ಮೊದಲಾದ ತರಬೇತಿಯು ಇರುತ್ತದೆ. ಜಮ್ಮುವಿನ ಮಾನ್ಸರ್ ನಲ್ಲಿ ಆಗಾಗ ಹೆದ್ದಾರಿ ಮುಚ್ಚುಗಡೆ ಆಗುವುದು ತರಬೇತಿಗೆ ತೊಂದರೆಯಾಗಿತ್ತು. ಮಾನಸ್ಬಾಲ್ ನಲ್ಲಿ ಆ ತೊಂದರೆ ಇರುವುದಿಲ್ಲ. ಕಾಶ್ಮೀರದ ಎನ್ ಸಿಸಿ ಕೆಡೆಟ್ ಗಳಿಗೆ ಇದರಿಂದ ಹೆಚ್ಚು ಅನುಕೂಲ ಆಗುತ್ತದೆ ಎಂದು ತಿಳಿಯಲಾಗಿದೆ.
ಇಲ್ಲಿನ ಸುಂದರ ಪರಿಸರ ಮತ್ತು ತರಬೇತಿಯು ಹೆಚ್ಚೆಚ್ಚು ಇಲ್ಲಿನ ಯುವಕರು ಎನ್ ಸಿಸಿ ಸೇರಲು ಪ್ರೇರೇಪಿಸುವುದು ಎನ್ನುವುದು ಕಾಲ್ಸಿ ಅಭಿಪ್ರಾಯ.
ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಅಕ್ಟೋಬರ್ ನಲ್ಲಿ ರಾಷ್ಟ್ರೀಯ ಮಟ್ಟದ ಎನ್ ಸಿಸಿ ಕ್ಯಾಂಪ್ ನಡೆಯಲಿದ್ದು ಈಗ ಸೆಪ್ಟೆಂಬರ್ 26ರವರೆಗೆ ಮಾನಸ್ಬಾಲ್ ನಲ್ಲಿ ಅದಕ್ಕೆ ಎನ್ ಸಿಸಿ ಕೆಡೆಟ್ ಗಳನ್ನು ತಯಾರು ಮಾಡಲಾಗುತ್ತಿದೆ.