ಬೆಂಗಳೂರು: ಹಿಮಾಚಲ ಪ್ರದೇಶ, ಕೇರಳ ಸರ್ಕಾರ ದಿವಾಳಿಯ ದಿಕ್ಕಿನಲ್ಲಿ ಹೋಗುತ್ತಿವೆ. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೂ ದಿವಾಳಿಯತ್ತ ಹೆಜ್ಜೆ ಇಡುತ್ತಿದೆ ಎಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ 60 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಮೊದಲು 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದರು, ಈಗ 60 ಪರ್ಸೆಂಟ್ ಕಮಿಷನ್ ಇದೆ. ಮುಂದೆ 65 ಪರ್ಸೆಂಟ್ ಪಡೆಯಬೇಕೆಂದು ಮಂತ್ರಿಮಂಡದಲ್ಲಿ ಚರ್ಚೆ ಆಗುತ್ತಿದೆ ಎಂದರು.
40 X 60 ಸೈಟ್ ನಲ್ಲಿ ಮನೆ ಕಟ್ಟಲು 20 ಲಕ್ಷ ರೂಪಾಯಿ ಕೊಡಬೇಕು. ಕಳೆದ 6 ತಿಂಗಳಿನಿಂದ ಕಾಂಗ್ರೆಸ್ ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್ ಇದೆ. ಹಿಂದೆ ನಮ್ಮ ವಿರುದ್ಧ 40 ಪರ್ಸೆಂಟ್ ಕಮಿಷನ್ ಎಂದು ಫೋಟೋ ಹಿಡಿಸಿದ್ದರು. ಅದೇ ಗುತ್ತಿಗೆದಾರರಿಂದ ಈಗ 40 ಪರ್ಸೆಂಟ್ ಗಿಂತ ಹೆಚ್ಚು ಕಮಿಷನ್ ಪೀಕುತ್ತಿದ್ದಾರೆ. ಅಂದಾಜು 32 ಸಾವಿರ ಕೋಟಿ ರೂ. ಸರ್ಕಾರದಿಂದ ಬರಬೇಕಿದೆ. ಸರ್ಕಾರ ಈಗ ಮತ್ತೆ ತೆರಿಗೆಗಳನ್ನು ಹಾಕಬೇಕು ಅಷ್ಟೇ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.