Home ಟಾಪ್ ಸುದ್ದಿಗಳು ಜಾರ್ಖಂಡ್: ಗಣಿಗಾರಿಕೆ ಮಾಫಿಯಾ ತಪಾಸಣೆ; ಮಹಿಳಾ ಸಬ್ ಇನ್ಸ್ ಪೆಕ್ಟರ್ ಹತ್ಯೆ

ಜಾರ್ಖಂಡ್: ಗಣಿಗಾರಿಕೆ ಮಾಫಿಯಾ ತಪಾಸಣೆ; ಮಹಿಳಾ ಸಬ್ ಇನ್ಸ್ ಪೆಕ್ಟರ್ ಹತ್ಯೆ

ರಾಂಚಿ: ಗಣಿಗಾರಿಕೆ ಮಾಫಿಯಾ ತಪಾಸಣೆಯ ವೇಳೆ ಪಿಕಪ್ ವಾಹನ ಹರಿಸಿ, ಮಹಿಳಾ ಸಬ್ ಇನ್ಸ್ ಪೆಕ್ಟರ್ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯ ತುಪುದನಾ ಏರಿಯಾದಲ್ಲಿ ನಡೆದಿದೆ. ಡಿವೈಎಸ್‌ಪಿಯೊಬ್ಬರ ಮೇಲೆ ಟ್ರಕ್‌ ಹರಿಸಿ ಹತ್ಯೆ ಮಾಡಿದ ಬೆನ್ನಲ್ಲೇ ಅಂತಹದ್ದೇ ಮತ್ತೊಂದು ಕೃತ್ಯ ವರದಿಯಾಗಿದೆ.


ಬುಧವಾರ ಬೆಳಗ್ಗೆ ನಸುಕಿನ ಜಾವದಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೃತ ಮಹಿಳಾ ಪೊಲೀಸ್ ಅಧಿಕಾರಿಯನ್ನು ಸಂಧ್ಯಾ ತೊಪ್ನೋ ಎಂದು ಗುರುತಿಸಲಾಗಿದೆ. ಸಂಧ್ಯಾ ಅವರು ತುಪುದುನಾ ಹೊರ ವಲಯದ ಉಸ್ತುವಾರಿ ವಹಿಸಿದ್ದರು ಎಂದು ರಾಂಚಿಯ ಎಸ್ಎಸ್ಪಿ ತಿಳಿಸಿದ್ದಾರೆ.


ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿ ನೆರವಿನಿಂದ ಬಂಧಿಸಿದ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಧ್ಯಾ ಅವರ ಸಾವಿಗೆ ಜಾರ್ಖಂಡ್ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. ಸಂಧ್ಯಾ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದೆ.


ಹರಿಯಾಣದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಗಣಿ ಪ್ರದೇಶಕ್ಕೆ ತೆರಳಿ ತಪಾಸಣೆ ನಡೆಸುತ್ತಿದ್ದಾಗ ಡಿಎಸ್‌ಪಿ ಮೇಲೆ ಟ್ರಕ್ ಹತ್ತಿಸಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ.

Join Whatsapp
Exit mobile version