ಬೆಂಗಳೂರು: ಆಸ್ತಿ ಕಬಳಿಸುವ ದುರಾಸೆಗೆ ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿದ್ದ ಅಣ್ಣನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯದ ಕಾವೇರಿಪುರಂನ ವಿನಯ್ ಕುಮಾರ್ (31) ಕೊಲೆಯಾದವರು. ಕೃತ್ಯವೆಸಗಿದ ಅಣ್ಣ ಸತೀಶ್ ಕುಮಾರ್(37) ನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ತಾವರೆಕೆರೆಯ ಅಮ್ಮ ಆಸ್ಪತ್ರೆಯಲ್ಲಿ ವಿನಯ್ ಕುಮಾರ್ ಲ್ಯಾಬ್ ಇಟ್ಟುಕೊಂಡಿದ್ದು, ಕಾವೇರಿಪುರ ಮೂರನೇ ಮುಖ್ಯರಸ್ತೆಯಲ್ಲಿ ಅವರ ತಂದೆ ಬಿಎಂಟಿಸಿ ನಿವೃತ್ತ ಚಾಲಕ ಅರಸಯ್ಯ, ತಾಯಿ ಜಯಮ್ಮ ಜೊತೆ ವಾಸಿಸುತ್ತಿದ್ದನು.
ವಿನಯ್ ಕುಮಾರ್ ಎರಡನೇ ಮಹಡಿಯ ಕೊಠಡಿಯಲ್ಲಿ ಮಲಗುತ್ತಿದ್ದರೆ, ವಿವಾಹವಾಗಿದ್ದ ಅಣ್ಣ ಸತೀಶ್ ಕುಮಾರ್ ಮೊದಲ ಮಹಡಿಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮೂರು ತಿಂಗಳ ಹಿಂದೆ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಜಯಮ್ಮ ಅವರ ಚಿನ್ನಾಭರಣಗಳನ್ನು ಅಡಮಾನ ಮಾಡಲಾಗಿತ್ತು. ಈ ವಿಷಯವಾಗಿ ಸಹೋದರರ ನಡುವೆ ಜಗಳ ಉಂಟಾಗಿ ಮಾತನಾಡುವುದನ್ನು ಬಿಟ್ಟಿದ್ದರು ಎನ್ನಲಾಗಿದೆ.
ಮನೆಯಲ್ಲಿ ತಮ್ಮನಿಗೆ ಭಾಗ ಕೊಡಬೇಕಾಗುತ್ತದೆ ಎಂಬ ಕಾರಣದಿಂದ ಅತನ ಆಸ್ತಿಯನ್ನು ಕಬಳಿಸುವ ದುರಾಸೆಗೆ ಸಂಚು ರೂಪಿಸಿದ ಅಣ್ಣ, ನಿನ್ನೆ ಮಧ್ಯಾಹ್ನ ಜಗಳ ತೆಗೆದು ವಿನಯ್ ಗೆ ಚಾಕುವಿನಿಂದ ಚುಚ್ಚಿ, ಮೂರನೇ ಕಟ್ಟಡದಿಂದ ಕೆಳಗೆ ದೂಡಿದ್ದಾನೆ.
ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ವಿನಯ್ ನನ್ನು ಸ್ಥಳೀಯ ಲಕ್ಷ್ಮಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತರ ತಾಯಿ ಜಯಮ್ಮ ನೀಡಿದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿ ಸತೀಶ್ ಕುಮಾರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದರು.