ಜನಹಿತಕ್ಕಾಗಿ ಕೆಲಸ ಮಾಡಬೇಕಿದ್ದ ಸರ್ಕಾರ, ಆಡಳಿತವನ್ನು ದಂಧೆ ಮಾಡಿಕೊಂಡಿದ್ದು, ಕುಮಾರಕೃಪ ಅತಿಥಿ ಗೃಹವನ್ನು ಜೂಜಿನ ಅಡ್ಡೆಯಂತೆ ಬಳಸಲಾಗುತ್ತಿದೆ. ಎಂದು ಜನತಾದಳ(ಜಾತ್ಯಾತೀತ) ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಜೆಡಿ(ಎಸ್), ಸ್ಯಾಂಟ್ರೋ ರವಿಗೆ ಕುಮಾರಕೃಪ ಅತಿಥಿ ಗೃಹದಲ್ಲಿ ತಿಂಗಳುಗಳ ಕಾಲ ವಾಸವಿರುವ ವ್ಯವಸ್ಥೆ ಕಲ್ಪಿಸಿದ್ದು ಯಾರು? ಮುಖ್ಯಮಂತ್ರಿ ಬೊಮ್ಮಾಯಿ ಮನೆಯಿಂದ ಕೂಗಳತೆಯಲ್ಲಿ ಇದು ನಡೆದಿದೆ ಎಂಬುದೇ ನಿಮ್ಮ ಆಡಳಿತ ಎಷ್ಟು ಕುಸಿದಿದೆ ಎಂದು ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸ್ಯಾಂಟ್ರೋ ರವಿಯೊಂದಿಗೆ ನಿಮ್ಮ ಸಚಿವರಿಗಿರುವ ಸಂಬಂಧವೇನು? ಉನ್ನತ ಪೊಲೀಸ್ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿಸಿ, ವರ್ಗಾವಣೆ ಕೆಲಸ ಮಾಡಿಸುತ್ತೇನೆ ಎನ್ನುವ ಈ ಡೀಲ್ ಗಿರಾಕಿಯ ವ್ಯವಹಾರಕ್ಕೆ ಸಾಥ್ ನೀಡಿದವರು ಯಾರು? ಸ್ಯಾಂಟ್ರೊ ರವಿಯ ಆಡಿಯೊಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪರಿಚಯವೇ ಇಲ್ಲವೆಂದ ಮೇಲೆ ಆತನಿಗೆ ಇಡೀ ರಾಜ್ಯ ಸರ್ಕಾರ ತನ್ನ ಜೇಬಲ್ಲಿದೆ ಎಂದು ಮಾತನಾಡುವ ಅಧಿಕಾರ ಕೊಟ್ಟವರು ಯಾರು? ಕಮಿಷನ್ ದಂಧೆಗಾಗಿ ಇಂತಹ ಎಷ್ಟು ಅಯೋಗ್ಯರನ್ನು ಸಾಕುತ್ತಾ ಇದ್ದೀರಿ ಎಂದು JDS ಪ್ರಶ್ನೆ ಮಾಡಿದೆ.
ಕುಮಾರಸ್ವಾಮಿ ಬಿಡುಗಡೆ ಮಾಡಿದ ಒಂದು ವಿಡಿಯೋದಿಂದಾಗಿ ಇಂಗು ತಿಂದ ಮಂಗನಂತೆ ತಡಬಡಾಯಿಸುತ್ತಿರುವ ಬಿಜೆಪಿಯವರೆ, ನಿಮ್ಮ ಬುಡ ಅಲುಗಾಡುತ್ತಿದೆ. 2023ರ ಚುನಾವಣೆಯಲ್ಲಿ ನೀವು ಕುಸಿದು ಹೋಗುವುದು ಖಂಡಿತ ಎಂದು ಅದು ಎಚ್ಚರಿಸಿದೆ.