ಬೆಂಗಳೂರು: ಈ ವರ್ಷದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ಥಬ್ದಚಿತ್ರಕ್ಕೆ ಕೇಂದ್ರ ಸರ್ಕಾರ ಅವಕಾಶ ನಿರಾಕರಿಸಿರುವುದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಮಾಡಿರುವ ಅವಮಾನ. ಕನ್ನಡಿಗರೆಲ್ಲರೂ ಇದನ್ನು ಒಕ್ಕೊರಲಿನಿಂದ ಖಂಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಮಾತು ಮಾತಿಗೆ ಡಬಲ್ ಎಂಜಿನ್ ಸರ್ಕಾರ ಎಂದು ರಾಜ್ಯ ಸರ್ಕಾರದ ನಾಯಕರು ಎದೆ ಬಡಿದುಕೊಳ್ಳುತ್ತಿದ್ದಾರೆ. ರಾಜ್ಯದ ಹಕ್ಕು ಮತ್ತು ಗೌರವದ ಪ್ರಶ್ನೆ ಎದುರಾದಾಗ ಮಾತ್ರ ಕರ್ನಾಟಕದ ಎಂಜಿನ್ ಗುಜರಿ ಆಗುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಎದುರು ಮಾಂಡಲೀಕರಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರದ ನಾಯಕರು ರಾಜ್ಯದ ಘನತೆ-ಗೌರವಗಳನ್ನು ದೆಹಲಿ ನಾಯಕರಿಗೆ ಅಡ ಇಟ್ಟಿರುವುದು ದುರದೃಷ್ಟಕರ. ಸತತ ಹದಿಮೂರು ವರ್ಷಗಳ ಕಾಲ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸ್ಥಬ್ದ ಚಿತ್ರಗಳು ನಮ್ಮ ಇತಿಹಾಸ ಸಂಸ್ಕೃತಿ ಮತ್ತು ಪ್ರಕೃತಿಯ ಹಿರಿಮೆಗಳನ್ನು ಪ್ರದರ್ಶಿಸಿ ಇಡೀ ದೇಶದ ಶ್ಲಾಘನೆಗೆ ಪಾತ್ರವಾಗಿತ್ತು. ಆದರೆ ಇದೇ ಮೊದಲ ಬಾರಿ ಈ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.