Home ಟಾಪ್ ಸುದ್ದಿಗಳು ಹಿಂದುತ್ವದ ಹೆಸರಿನಲ್ಲಿ ರಾಜಕೀಯ, ಭಾವನಾತ್ಮಕತೆ ಕೆರಳಿಸಿ ಉದ್ಯೋಗ ಸೃಷ್ಟಿ ಕಡೆಗಣಿಸಿದ ಬಿಜೆಪಿ ಸರಕಾರ: ಎಚ್ ಡಿಕೆ

ಹಿಂದುತ್ವದ ಹೆಸರಿನಲ್ಲಿ ರಾಜಕೀಯ, ಭಾವನಾತ್ಮಕತೆ ಕೆರಳಿಸಿ ಉದ್ಯೋಗ ಸೃಷ್ಟಿ ಕಡೆಗಣಿಸಿದ ಬಿಜೆಪಿ ಸರಕಾರ: ಎಚ್ ಡಿಕೆ

► ಬಿಡದಿ ತೋಟದಲ್ಲಿ ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯ ಕಾರ್ಯಾಗಾರ

ಬೆಂಗಳೂರು: ರಾಜ್ಯ ಬಿಜೆಪಿ ಸರಕಾರವೂ ತನ್ನ ಹಿಡನ್ ಅಜೆಂಡಾಗಳಿಗೆ ಜೋತುಬಿದ್ದು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು. ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಸಂಘಟನಾ ಕಾರ್ಯಾಗಾರದಲ್ಲಿ ನಾಲ್ಕನೇ ದಿನದ ಕಾರ್ಯಕ್ರಮ ಆರಂಭಕ್ಕೆ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು.


ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಬಿಜೆಪಿ ಸರಕಾರ ತೀವ್ರ ನಿರ್ಲಕ್ಷ್ಯ ತೋರಿದೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನಾನು ಜಾರಿಗೆ ತಂದ ಉದ್ಯೋಗ ಸೃಷ್ಟಿಯ ಕಾರ್ಯಕ್ರಮಗಳನ್ನು ಸರಕಾರ ಉಪೇಕ್ಷೆ ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಉದ್ಯೋಗ ಕೊಡುವುದಾಗಿ ಅಂತ ಬಿಜೆಪಿ ಸರಕಾರ ಹೇಳಿತ್ತು. ಆದರೆ ದುಡಿಯುವ ಕೈಗಳಿಗೆ ಕೆಲಸ ಕೊಡದೆ ನಿರುದ್ಯೋಗವನ್ನು ಉಡುಗೊರೆಯಾಗಿ ನೀಡಿದೆ. 9 ಜಿಲ್ಲೆಗಳಲ್ಲಿ ಕೈಗಾರಿಕಾ ಸಮುಚ್ಚಯ ಮಾಡುವ ನನ್ನ ನೇತೃತ್ವದ ಸಮ್ಮಿಶ್ರ ಸರಕಾರ ನಿರ್ಧಾರ ಮಾಡಿತ್ತು. ಆದರೆ, ಈ ಸರಕಾರ ಆ ಯೋಜನೆಯನ್ನು ಮೊಲೆಗುಂಪು ಮಾಡಿದೆ ಎಂದು ಹೆಚ್ ಡಿಕೆ ಹೇಳಿದರು.


ಸರಕಾರ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ. ಬಿಜೆಪಿಗೆ ಹಿಂದೂ ರಾಷ್ಟ್ರ ಮಾಡಬೇಕು ಎಂಬ ಪ್ರಮುಖ ಉದ್ದೇಶ ಇದೆ. ಈ ಮೂಲಕ ಯುವಕರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಯುವಕರು ಹಾಗೂ ಮಹಿಳೆಯರಿಗೆ ಸ್ವಾವಲಂಭಿಯಾಗಿ ಬದುಕುಬೇಕು. ಅದಕ್ಕೆ ಅವಕಾಶ ಮಾಡಿಕೊಡುವ ಕೆಲಸವನ್ನು ಸರಕಾರ ಮಾಡುತ್ತಿಲ್ಲ ಎಂದು ಅವರು ಟೀಕಿಸಿದರು.


ಪ್ರತಿಯೊಂದು ಕುಟುಂಬದ ಯುವಕರಿಗೆ ಉದ್ಯೋಗ ದೊರಕಬೇಕು. ನಿರುದ್ಯೋಗ ತೊಡೆದು ಹಾಕುವುದು ಜೆಡಿಎಸ್ ಗುರಿ. ಮೊದಲು ಎಲ್ಲರಿಗೂ ಕೆಲಸ ಸಿಗಲಿ. ಬದುಕು ಸಿಗಲಿ. ಆಮೇಲೆ ಹಿಂದೂ ರಾಷ್ಟ್ರದ ಬಗ್ಗೆ ಯೋಚನೆ ಮಾಡೋಣ. ರಾಜ್ಯದ ಮೂಲೆ ಮೂಲೆಯಲ್ಲಿ ಯುವಕರು ಸಂಘಟನೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

2023ರಲ್ಲಿ ಯುವ ಶಕ್ತಿ, ಮಹಿಳಾ ಶಕ್ತಿ ಜನಪರ ಸರ್ಕಾರ ತರಬೇಕಾಗುತ್ತದೆ. ಯುವಕರಿಗೂ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಯುವಕರಿಗೆ ಇಂದು ಈ ಬಗ್ಗೆಯೇ ಸಂದೇಶ ನೀಡುವೆ. ಹಣದ ರಾಜಕಾರಣ ಮೆಟ್ಟಿ ನಿಲ್ಲಬೇಕು. ಜನರ ಹತ್ತಿರ ಹೋಗಿ ಜನರ ಸಮಸ್ಯೆಗಳನ್ನು ಆಲಿಸಬೇಕಾಗುತ್ತದೆ ಎಂದರಲ್ಲದೆ, ನಿಖಿಲ್ ಹಾಗೂ ಪ್ರಜ್ವಲ್ ಜಂಟಿ ನಾಯಕತ್ವದಲ್ಲಿ ಯುವ ಜನತೆಯನ್ನು ಒಗ್ಗೂಡಿಸಿ ಮುಂದಿನ ಚುನಾವಣೆ ಎದುರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.


ಇಂದು ನಾಲ್ಕನೇ ದಿನದ ಕಾರ್ಯಾಗಾರ ನಡೆಯುತ್ತಿದೆ. ಇವತ್ತು ಕೊನೆಯ ದಿನ ಯುವ ಜನತಾ ದಳ ಕಾರ್ಯಗಾರ. ಉತ್ಸಾಹದಲ್ಲಿ ಈ ಕಾರ್ಯಾಗಾರ ಆರಂಭವಾಗಿದೆ. ನಾವು 300 ಜನರಿಗೆ ಮಾತ್ರ ಆಹ್ವಾನ ಕೊಟ್ಟಿದ್ದೆವು. ಆದರೆ ಹೆಚ್ಚಿನ ಜನ ಇಂದು ಸೇರಿದ್ದಾರೆ. ಈ ಕಾರ್ಯಾಗಾರದಲ್ಲಿ ಮುಂದಿನ 2023 ರ ಗುರಿ ಏನಿದೆ ಅದಕ್ಕೆ ಯುವ ಜನತೆಯ ದುಡಿಮೆ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.

Join Whatsapp
Exit mobile version