Home ಟಾಪ್ ಸುದ್ದಿಗಳು RSS ಗೆ ಹಣ ಎಲ್ಲಿಂದ ಹರಿದುಬರುತ್ತದೆ: ತನಿಖೆ ಕೋರಿ ಐಟಿ, ಈಡಿಗೆ ದೂರು ನೀಡಿದ ಸಾಮಾಜಿಕ...

RSS ಗೆ ಹಣ ಎಲ್ಲಿಂದ ಹರಿದುಬರುತ್ತದೆ: ತನಿಖೆ ಕೋರಿ ಐಟಿ, ಈಡಿಗೆ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ ಎಸ್‌ ಎಸ್)ಗೆ ಹರಿದು ಬರುತ್ತಿರುವ ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಕೋರಿ ನಾಗ್ಪುರ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ (ಐ-ಟಿ) ಇಲಾಖೆಗೆ ದೂರು ನೀಡಿದ್ದಾರೆ ಎಂದು ಮಂಗಳವಾರ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.


ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ಆರ್ ಎಸ್ ಎಸ್ ದೇಶದ ನಾಗರಿಕರಿಗೆ ನೀಡಿದ ವಿವಿಧ ರೀತಿಯ ಸಹಾಯದ ಬಗ್ಗೆ ಸಂಘ ಟ್ವಿಟರ್‌ನಲ್ಲಿ ವಿವರ ನೀಡಿದೆ. ಈ ಸಾಮಾಜಿಕ ಕಾರ್ಯಕ್ಕೆ ಹಣಕಾಸು ನೆರವು ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮೋಹನೀಶ್ ಜಬಲ್ಪುರೆ ಎಂಬವರು ಒತ್ತಾಯಿಸಿದ್ದಾರೆ.


ಮೇ, 2020 ರಲ್ಲಿ ಆರ್‌ ಎಸ್‌ ಎಸ್ ತಿಳಿಸಿದಂತೆ, ಸಂಘವು ಸಂತ್ರಸ್ತ ಕುಟುಂಬಗಳಿಗೆ 1.1 ಕೋಟಿ ಪಡಿತರ ಕಿಟ್‌ ಗಳನ್ನು ವಿತರಿಸಿದೆ. 7.1 ಕೋಟಿ ಊಟದ ಪ್ಯಾಕೆಟ್ ಮತ್ತು 63 ಲಕ್ಷ ಮಾಸ್ಕ್ ಗಳನ್ನು ವಿತರಿಸಿದೆ. ಈ ಸೇವಾ ಕಾರ್ಯಗಳಿಗೆ ಅಪಾರ ಪ್ರಮಾಣದ ಹಣ ಬೇಕಾಗುತ್ತದೆ. ಈ ಹಣ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಮೋಹನೀಶ್ ದೂರಿನಲ್ಲಿ ತಿಳಿಸಿದ್ದಾರೆ.

ಆರ್‌ ಎಸ್‌ ಎಸ್ ವಿರುದ್ಧ ನಾಗ್ಪುರ ಚಾರಿಟಿ ಕಮಿಷನರ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಮೋಹನೀಶ್ ಈ ಹಿಂದೆ ದೂರು ದಾಖಲಿಸಿದ್ದರು. ಆದಾಗ್ಯೂ, ದತ್ತಿ ಆಯುಕ್ತರು ದೂರನ್ನು ವಜಾಗೊಳಿಸಿದ್ದು, ಆರ್‌ ಎಸ್‌ ಎಸ್ ಸೊಸೈಟೀಸ್ ನೋಂದಣಿ ಕಾಯ್ದೆ, 1860, ಅಥವಾ ಮಹಾರಾಷ್ಟ್ರ ಸಾರ್ವಜನಿಕ ಟ್ರಸ್ಟ್ ಕಾಯ್ದೆಯ ಅಡಿಯಲ್ಲಿ ನೋಂದಾಯಿತ ಸಂಘಟನೆಯಲ್ಲ. ಆದ್ದರಿಂದ, ಆಯುಕ್ತರ ಅಧಿಕಾರ ವ್ಯಾಪ್ತಿಗೆ ಇದು ಬರುವುದಿಲ್ಲ ಎಂದು ದೂರನ್ನು ವಜಾಗೊಳಿಸಲಾಗಿದೆ ಎಂದು ನಾಗಪುರ ಟುಡೇ ವರದಿ ಮಾಡಿದೆ.

ಇದರಿಂದ ಸಾಮಾಜಿಕ ಕಾರ್ಯಕರ್ತ ಇಡಿ ಮತ್ತು ಐಟಿ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಆರ್‌ ಎಸ್‌ ಎಸ್ ನೋಂದಾಯಿತ ಸಂಘಟನೆಯಲ್ಲ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ, ಬೃಹತ್ ಸೇವಾ ಕಾರ್ಯ ಕೈಗೊಳ್ಳಲು ಅಗತ್ಯವಾದ ಹಣವನ್ನು ಹೇಗೆ ಸಂಗ್ರಹಿಸಲು ಸಾಧ್ಯವಾಯಿತು ಎಂದು ಅವರು ಪ್ರಶ್ನಿಸಿದ್ದಾರೆ.

ಆರ್ ಎಸ್ ಎಸ್ ಗೆ ಇಷ್ಟೊಂದು ಹಣ ಎಲ್ಲಿಂದ ಬಂತು? ಅವರು ಹೇಳುತ್ತಿರುವ ಸಾಮಾಜಿಕ ಸೇವಾ ಕಾರ್ಯ ನಿಜವೇ ಅಥವಾ “ಕೇವಲ ಪ್ರಚಾರಕ್ಕಾಗಿ ಹೇಳುತ್ತಿದ್ದಾರೆಯೇ” ಎಂದು ಜಬಲ್ಪುರೆ ಪ್ರಶ್ನಿಸಿದ್ದಾರೆ.

ಐಟಿ, ಈಟಿ ಸಮನ್ಸ್ ನೀಡಿದರೆ ಉತ್ತರಿಸುವುದಾಗಿ ಆರ್‌ ಎಸ್‌ ಎಸ್‌ ನ ಹಿರಿಯ ಸದಸ್ಯ ಅರವಿಂದ ಕುಕ್ಡೆ ತಿಳಿಸಿದ್ದಾರೆ.

Join Whatsapp
Exit mobile version