Home ಟಾಪ್ ಸುದ್ದಿಗಳು ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ಜಯ ಕರ್ನಾಟಕ ಸಂಘಟನೆ ಬೆಂಬಲ

ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ಜಯ ಕರ್ನಾಟಕ ಸಂಘಟನೆ ಬೆಂಬಲ


ಬೆಂಗಳೂರು: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೆ ಜಯ ಕರ್ನಾಟಕ ಸಂಘಟನೆ ಬೆಂಬಲ ಸೂಚಿಸಿದೆ.


ಸಂಘಟನೆಯ ರಾಜ್ಯ ಮುಖ್ಯ ಸಲಹೆಗಾರ ಪ್ರಕಾಶ್ ರೈ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮಹಕ್ಕು ನಮ್ಮ ನೀರು ವಿಚಾರವಾಗಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ನಡೆಯುವ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹಕಾರ ಕೋರಿ ಮಾಡಿರುವ ಮನವಿಗೆ ಸ್ಪಂದಿಸಿ ಮುತ್ತಪ್ಪ ರೈ ಸ್ಥಾಪಿತ ಜಯಕರ್ನಾಟಕ ಸಂಘಟನೆ ಬೆಂಬಲಿಸುತ್ತದೆ ಎಂದು ತಿಳಿಸಿದರು.


ಕಳೆದ 14 ವರ್ಷಗಳಿಂದ ಜಯಕರ್ನಾಟಕ ಸಂಘಟನೆ ನಾಡು ನುಡಿ ಜಲ ಪರವಾಗಿ ನಿರಂತರ ಹೋರಾಟವನ್ನು ಮಾಡಿಕೊಂಡು ಬಂದಿದೆ. ಅನೇಕ ವರ್ಷಗಳಿಂದ ರಾಮನಗರ ಜಿಲ್ಲೆಯಲ್ಲಿ ಎಲ್ಲಾ ರೈತ ಮತ್ತು ಕನ್ನಡಪರ ಸಂಘಟನೆಗಳು ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಬೇಕೆಂದು ಹೋರಾಟಗಳನ್ನು ಮಾಡಿಕೊಂಡು ಬಂದಿದೆ.

ಅದರಲ್ಲೂ ವಿಶೇಷವಾಗಿ ಜಯಕರ್ನಾಟಕ ಸಂಘಟನೆ ರಾಮನಗರ ಜಿಲ್ಲೆಗೆ ನೀರಾವರಿ ವಿಚಾರಕ್ಕೆ ಸಂಬಂಧಪಟ್ಟಂತೆ ವೃಷಭಾವತಿ ನದಿ ನೀರು ಶುದ್ಧೀಕರಣ, ಬಿಡದಿ ಭಾಗಕ್ಕೆ ಕಾವೇರಿ ನೀರು ಪೂರೈಕೆ, ಅರ್ಕಾವತಿ ನದಿ ಶುದ್ಧೀಕರಣ ಮಂಚನಬೆಲೆ ಎಡದಂಡೆ ಬಲದಂಡೆ ನಾಲೆಯಲ್ಲಿ ನೀರು ಹರಿಸುವಂತೆ ಒತ್ತಾಯ ಹಾಗೂ ಮೇಕೆದಾಟು ಆಣೆಕಟ್ಟು ಕುಡಿಯುವ ನೀರು ಯೋಜನೆಯನ್ನು ಜಾರಿಗೊಳಿಸಬೇಕೆಂದು ಅನೇಕ ವರ್ಷಗಳಿಂದ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.


ರಾಮನಗರ ಜಿಲ್ಲೆಯ ಅಭಿವೃದ್ಧಿಗಾಗಿ ಯಾವುದೇ ಪಕ್ಷ ಪಾದಯಾತ್ರೆಯನ್ನು ಅಥವಾ ಹೋರಾಟವನ್ನು ಮಾಡಿದಾಗ ನಮ್ಮ ಸಂಘಟನೆ ಅವಶ್ಯಕವಾಗಿ ಬೆಂಬಲವನ್ನು ನೀಡಲು ಸಿದ್ಧ. ಅಂದು ಯಾವುದೇ ರಾಜಕೀಯ ಪಕ್ಷಗಳು ಬೆಂಬಲಿಸದೆ ಇದ್ದರೂ ಕೂಡ ಜಯಕರ್ನಾಟಕ ಸಂಘಟನೆ ಹಾಗೂ ಜಿಲ್ಲೆಯ ಇತರ ಕನ್ನಡಪರ ರೈತಪರ ಸಂಘಟನೆಗಳು ಕೂಡ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಪರಿಣಾಮ, ಇಂದು ಅದನ್ನು ಪರಿಗಣಿಸಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಇಂದು ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದು ಸ್ವಾಗತ ಎಂದು ತಿಳಿಸಿದರು.

Join Whatsapp
Exit mobile version