ಬೆಂಗಳೂರು: 108 ಆಂಬುಲೆನ್ಸ್ ಸಿಬ್ಬಂದಿಗೆ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳ್ಳಲಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಜನರಿಗಿಂತ ಜನಪ್ರಿಯತೆಯ ವ್ಯಸನವೇ ಹೆಚ್ಚು. ಬರ ನಿರ್ವಹಣೆಗಿಂತ ಬೇಜವಾಬ್ದಾರಿಯೇ ಜಾಸ್ತಿ. ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡಿದ್ದೇವೆನ್ನುವ ಇವರಿಗೆ 108 ಆಂಬುಲೆನ್ಸ್ ಚಾಲಕರಿಗೆ ಸಂಬಳ ಕೊಡಲಿಕ್ಕೂ ಹಣವಿಲ್ಲ! ತಮ್ಮ ಜೀವ ಪಣಕ್ಕಿಟ್ಟು ಜನರ ಜೀವ ರಕ್ಷಿಸುವ ಈ ಚಾಲಕರಿಗೆ ಸಂಬಳದ ಗ್ಯಾರಂಟಿ ಕೊಡಲು ಸಾಧ್ಯವಾಗಿಲ್ಲ. 3 ತಿಂಗಳಿಂದ ಅವರಿಗೆ ವೇತನ ಪಾವತಿ ಮಾಡಿಲ್ಲ ಎಂದರೆ ನಾಚಿಕೆಗೇಡು!” ಎಂದು ವಾಗ್ದಾಳಿ ಮಾಡಿದರು. “ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಷಣ ಬಿಗಿದಿದ್ದಾರೆ. “ರಾಜ್ಯದ ಒಬ್ಬನೇ ಒಬ್ಬ ಸರಕಾರಿ ನೌಕರ ನನ್ನ ಬಳಿ ಬಂದು ಸಂಬಳ ಪಾವತಿಯಾಗಿಲ್ಲ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದು ಗುಡುಗಿದ್ದರು. ಹಾಗಾದರೆ, ಮಾನ್ಯ ಸಿದ್ದರಾಮಯ್ಯನವರೇ.. ನೀವು ರಾಜೀನಾಮೆ ನೀಡುವುದು ಯಾವಾಗ? ಕುರ್ಚಿ ಬಿಡುವ ಮೊದಲು ಆಂಬುಲೆನ್ಸ್ ಚಾಲಕರಿಗೆ ವೇತನ ಕೊಡಿಸಿ” ಎಂದು ಹರಿಹಾಯ್ದರು.