ವಿಜಯಪುರ: ಜಿಲ್ಲೆಯಲ್ಲಿರುವ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಈ ಭಾಗದ ಮಹಿಳೆಯರ ಶಿಕ್ಷಣ ಗುಣಮಟ್ಟ ಹಾಗೂ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಂಜುಂಡಪ್ಪ ವರದಿಯ ಆಧಾರದ ಮೇಲೆ ಸ್ಥಾಪಿತವಾಗಿರುವ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿದೆ. ಈಗಿನ ಸರಕಾರ ಹಾಗೂ ಅದರ ಪ್ರತಿನಿಧಿಗಳು ಸೇರಿಕೊಂಡು ಮಹಿಳಾ ವಿಶ್ವವಿದ್ಯಾಲಯದ ಮೂಲ ಆಶಯಗಳಿಗೆ ಧಕ್ಕೆ ತರುವ ಹುನ್ನಾರ ನಡೆಸಿರುವುದು ಮತ್ತು ವಿಶ್ವ ವಿದ್ಯಾಲಯ ಮುಚ್ಚಲು ಯೋಜನೆ ರೂಪಿಸುವತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗಯಾಗಿದೆ. ರಾಜ್ಯ ಸರ್ಕಾರದ ಈ ನಡೆ ಮಹಿಳಾ ವಿರೋಧಿ ನಡೆಯಾಗಿದೆ ಎಂದು ಹೋರಾಟಗಾರ ಹಾಗೂ ನ್ಯಾಯವಾದಿ ಶ್ರೀನಾಥ್ ಪೂಜಾರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಸರಕಾರ ಈ ಅವೈಜ್ಞಾನಿಕ ಆಲೋಚನೆಯನ್ನು ಕೈ ಬಿಡಬೇಕು, ಸರಕಾರಕ್ಕೆ ವಿಜಯಪುರ ಜಿಲ್ಲೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶವಿದ್ದರೆ ಈ ಮಹಿಳಾ ವಿಶ್ವವಿದ್ಯಾಲಯ ಮುಚ್ಚದೆ ಮತ್ತೊಂದು ವಿಶ್ವವಿದ್ಯಾಲಯ ಪ್ರಾರಂಭಿಸಿ ಈ ಭಾಗದ ಮಹಿಳೆಯರ ಶಿಕ್ಷಣಕ್ಕೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಸರ್ಕಾರ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಮೂಲ ಆಶಯಗಳಿಗೆ ಧಕ್ಕೆ ತರುವ ಮತ್ತು ಮುಚ್ಚಲು ಅಥವಾ ಮೂಲ ಆಶಯಗಳನ್ನು ಬದಲಾಯಿಸಲು ಪ್ರಯತ್ನ ಪಟ್ಟರೆ ಈ ಭಾಗದ ಹಾಗೂ ನಾಡಿನ ಮಹಿಳೆಯರ ಪರವಾಗಿ ತಕ್ಕ ಉತ್ತರ ನಿಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ, ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಹಾಜಿಮನಿ, ನಗರ ಘಟಕದ ಅಧ್ಯಕ್ಷ ಆನಂದ ಮುದೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.