Home ಟಾಪ್ ಸುದ್ದಿಗಳು ರಾಜ್ಯಪಾಲರು ಗೂಂಡಾಗಳಂತೆ ತುಚ್ಛವಾಗಿ ವರ್ತಿಸುವುದು ಸರಿಯಲ್ಲ: ಸಿಪಿಐಎಂ

ರಾಜ್ಯಪಾಲರು ಗೂಂಡಾಗಳಂತೆ ತುಚ್ಛವಾಗಿ ವರ್ತಿಸುವುದು ಸರಿಯಲ್ಲ: ಸಿಪಿಐಎಂ

ತಿರುವನಂತಪುರಂ: ಎಸ್‌ಎಫ್‌ಐ ನಡೆಸುತ್ತಿದ್ದ ಪ್ರತಿಭಟನೆ ವಿರೋಧಿಸಿ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ರಸ್ತೆ ಬದಿ ಕುಳಿತ ಪ್ರಸಂಗವನ್ನು ಆಡಳಿತಾರೂಢ ಸಿಪಿಐಎಂ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದ ಘಟನೆ’ಎಂದು ಕರೆದಿದೆ. ಅಲ್ಲದೆ, ರಾಜ್ಯಪಾಲ ಆದವರು ಬೀದಿ ಗೂಂಡಾಗಳಂತೆ ತುಚ್ಛವಾಗಿ ವರ್ತಿಸುವುದು ಸರಿಯಲ್ಲ ಎಂದು ಹೇಳಿದೆ.

ರಾಜ್ಯಪಾಲರ ವರ್ತನೆಯನ್ನು ಕಟುವಾಗಿ ಟೀಕಿಸಿ, ಪಕ್ಷದ ಮುಖವಾಣಿ ಪತ್ರಿಕೆ ‘ದೇಶಾಭಿಮಾನಿ’ಯಲ್ಲಿ ಸಂಪಾದಕೀಯ ಬರೆದ ಸಿಪಿಐಎಂ, ಗೌರವಾನ್ವಿತ ಸ್ಥಾನದಲ್ಲಿರುವ ಹೊರತಾಗಿಯೂ ದೇಶದ ಕಾನೂನಿಗೆ ಬದ್ಧವಾಗಿ ಇರುವುದನ್ನು ಖಾನ್ ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ರಾಜ್ಯಪಾಲರಿಗೆ ಸಂವಿಧಾನ ನೀಡಿಲ್ಲ. ರಾಜ್ಯ ಸಂಪುಟದ ಸಲಹೆ ಮೇರೆಗೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅದಕ್ಕಾಗಿ ರಾಜ್ಯದ ಜನರು ಸರ್ಕಾರವನ್ನು ಚುನಾಯಿಸಿದ್ದಾರೆ ಎಂದು ಆಡಳಿತಾರೂಢ ಪಕ್ಷ ಹೇಳಿದೆ.

ರಾಜ್ಯದ ವಿಶ್ವವಿದ್ಯಾಲಯಗಳನ್ನು ಕೇಸರೀಕರಣ ಮಾಡುವ ಪ್ರಯತ್ನದಲ್ಲಿ ರಾಜ್ಯಪಾಲರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಎಸ್‌ಎಫ್‌ಐನ ಕಾರ್ಯಕರ್ತರು ರಾಜ್ಯದ ನಿಲಮೇಲ್‌ನಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನಕಾರರ ಮೇಲೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯಪಾಲರು ರಸ್ತೆ ಬಳಿಯೇ ಕುಳಿತಿದ್ದರು. ಎಸ್‌ಎಫ್‌ಐನ 17 ಮಂದಿ ಕಾರ್ಯಕರ್ತರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನ ಪ್ರತಿಯನ್ನು ಪೊಲೀಸರು ತೋರಿಸಿದ ನಂತರ ಖಾನ್ ಅವರು ಅಲ್ಲಿಂದ ತೆರಳಿದ್ದರು.

Join Whatsapp
Exit mobile version