ಪುತ್ತೂರು: ಟಿಪ್ಪರ್ ಹಾಗೂ ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಶಾಲಾ ಶಿಕ್ಷಕಿ ಸಾವನಪ್ಪಿದ ಘಟನೆ ಪುತ್ತೂರಿನ ಪೋಲ್ಯದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಮದಕ ಸುರೇಶ್ ಕುಲಾಲ್ ಪತ್ನಿ ಅನಿತಾ(35) ಮೃತರು.
ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಅನಿತಾ ಕೆಲ ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಇಂದು ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಪತಿ ಸುರೇಶ್ ಕುಲಾಲ್ ಮತ್ತು ಮಗುವಿನೊಂದಿಗೆ ಚಿಕಿತ್ಸೆಗೆಂದು ಬಂದಿದ್ದರು. ಚಿಕಿತ್ಸೆ ಪಡೆದು ಬೈಕ್ನಲ್ಲಿ ಹಿಂದಿರುಗುವ ವೇಳೆ ಕಬಕ ಸಮೀಪ ಪೋಳ್ಯ ಎಂಬಲ್ಲಿ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಹಿಂಬದಿ ಸವಾರೆ ಅನಿತಾ ಹಾಗೂ ಅವರು ಮಗು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಕೂಡಲೇ ಅವರನ್ನು ಬೊಳುವಾರು ಮಹಾವೀರ ಆಸ್ಪತ್ರೆಗೆ ಕರೆ ತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅನಿತಾ ಮೃತಪಟ್ಟಿದ್ದರು. ಮಗುವಿನ ಭುಜದ ಭಾಗಕ್ಕೆ ಸಣ್ಣ ಪುಟ್ಟ ಗಾಯವಾಗಿದೆ. ಸುರೇಶ್ ಕುಲಾಲ್ಗೂ ಸಣ್ಣ ಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರು ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.