Home ಅಂಕಣಗಳು ದಲಿತರ ಕಲ್ಯಾಣಕ್ಕೆ ಬಜೆಟ್ ನ ಶೇಕಡಾ 24ರಷ್ಟು ಹಣ ಮೀಸಲಿಡಲು ಬಿಜೆಪಿ ಸರ್ಕಾರ ಸಿದ್ಧವಿದೆಯೇ !?

ದಲಿತರ ಕಲ್ಯಾಣಕ್ಕೆ ಬಜೆಟ್ ನ ಶೇಕಡಾ 24ರಷ್ಟು ಹಣ ಮೀಸಲಿಡಲು ಬಿಜೆಪಿ ಸರ್ಕಾರ ಸಿದ್ಧವಿದೆಯೇ !?

ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತಂದು ಬಜೆಟ್ ನ ಶೇಕಡಾ 24ರಷ್ಟನ್ನು ದಲಿತರ ಕಲ್ಯಾಣಕ್ಕಾಗಿ ಮೀಸಲಿಡಲು ಭಾರತೀಯ ಜನತಾ ಪಕ್ಷ ಸರ್ಕಾರ ಸಿದ್ದ ಇದೆಯೇ? ನಾನು ದಲಿತರನ್ನು ಅವಮಾನಿಸಿದ್ದೇನೆ ಎಂಬ ಸುಳ್ಳು ಆರೋಪದ ಮೂಲಕ ಅತ್ಯಂತ ಕೀಳುಮಟ್ಟದ ಆರೋಪಗಳನ್ನು ಬಿಜೆಪಿ ದಲಿತ ಮೋರ್ಚಾದ ಕೆಲವು ನಾಯಕರು ಮಾಡಿರುವುದನ್ನು ಮಾಧ್ಯಮಗಳ ವರದಿಗಳ ಮೂಲಕ ಗಮನಿಸಿದ್ದೇನೆ.


ಸಿಂದಗಿಯಲ್ಲಿ ನಡೆದಿದ್ದ ಮಾದಿಗ ದಂಡೋರಾ ಸಭೆಯಲ್ಲಿ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ನಾರಾಯಣ ಸ್ವಾಮಿ ಮೊದಲಾದ ನಾಯಕರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಬಿಜೆಪಿ ಜೊತೆ ಸ್ವಾರ್ಥಕ್ಕಾಗಿ ಸೇರಿದ್ದಾರೆ ಎಂದು ಹೇಳಿದ್ದೆ ಹೊರತು ಎಲ್ಲಿಯೂ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂದು ಹೇಳಿಲ್ಲ. ಆ ದಿನದ ಭಾಷಣದ ವಿಡಿಯೋ ಕೂಡಾ ಲಭ್ಯವಿದೆ.


ನನ್ನನ್ನು ದಲಿತ ವಿರೋಧಿ ಎಂದು ಚಿತ್ರಿಸಲು ಹೊರಟಿರುವ ಬಿಜೆಪಿ ದಲಿತ ಮೋರ್ಚಾದ ತಥಕಾಥಿತ ನಾಯಕರು, ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದಾಗ, ದಲಿತರನ್ನು ನಾಯಿಗಳು ಎಂದು ತುಚ್ಚೀಕರಿಸಿದಾಗ ಎಲ್ಲಿ ಹೋಗಿದ್ದರು? ಯಾಕೆ ಬಾಯಿ ಮುಚ್ಚಿಕೊಂಡಿದ್ದರು? ಯಾಕೆ ಪ್ರತಿಭಟಿಸಲಿಲ್ಲ? ಎನ್ನುವುದನ್ನು ಕೂಡಾ ರಾಜ್ಯದ ಜನತೆಗೆ ತಿಳಿಸಬೇಕು.
ರಾಜಕೀಯ ಅಧಿಕಾರ ಎನ್ನುವುದು ಅಭಿವೃದ್ಧಿಯ ಬಾಗಿಲನ್ನು ತೆರೆಯುವ ಮಾಸ್ಟರ್ ಕೀಲಿಕೈ’ ಎನ್ನುವ ಬಾಬಾಸಾಹೇಬ್ ಅಂಬೇಡ್ಕರ್ ಮಾತನ್ನು ಸಂಪೂರ್ಣವಾಗಿ ನಾನು ನಂಬಿದವನು. ನನ್ನ ಕೈಗೆ ಅಧಿಕಾರ ಬಂದಾಗೆಲ್ಲ ಅದನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವೂ ಸೇರಿದಂತೆ ಸರ್ವಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದೇನೆ. ಇವೆಲ್ಲವೂ ಅಧಿಕೃತ ದಾಖಲೆಯ ರೂಪದಲ್ಲಿ ಜನರ ಮುಂದಿದೆ. ಇದೇ ರೀತಿ ಭಾರತೀಯ ಜನತಾ ಪಕ್ಷ ತಮ್ಮ ಕೈಗೆ ಅಧಿಕಾರ ಬಂದಾಗ ಏನು ಮಾಡಿದೆ ಎನ್ನುವುದು ಕೂಡಾ ದೇಶ ಮತ್ತು ರಾಜ್ಯದ ಜನತೆಯ ಮುಂದಿದೆ.


ದಲಿತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ರಚಿಸಿದ್ದ ಕಾಯ್ದೆಗಳು, ರೂಪಿಸಿ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಮುಂದಿಟ್ಟು ಸಾರ್ವಜನಿಕವಾಗಿ ಚರ್ಚೆ ನಡೆಸಿದರೆ ನಾನು ಅದರಲ್ಲಿ ಭಾಗವಹಿಸಲು ಸಿದ್ಧನಿದ್ದೇನೆ. ಈ ಮೂಲಕ ಯಾವ ಪಕ್ಷ ದಲಿತರ ಪರವಾಗಿದೆ ಮತ್ತು ವಿರುದ್ದವಾಗಿದೆ ಎನ್ನುವುದನ್ನು ಸಾರ್ವಜನಿಕರ ತೀರ್ಮಾನಿಸಲಿ.
ರಾಜ್ಯ ಬಜೆಟ್ ನ ಶೇಕಡಾ 24.1ರಷ್ಟು ಭಾಗವನ್ನು ಮೀಸಲಿಡುವ SC SP/TSP ಕಾಯ್ದೆಯನ್ನು ನಾನು ಜಾರಿಗೆ ತಂದಿದ್ದೆ. ಆಂಧ್ರಪ್ರದೇಶ ಸರ್ಕಾರದಲ್ಲಿ ಇದೇ ಉದ್ದೇಶ ಕಾಯ್ದೆಯಿದ್ದರೂ ನಾವು ರಚಿಸಿದ ಕಾಯ್ದೆ ಹೆಚ್ಚು ಪ್ರಗತಿಪರವಾದುದು, ನಮ್ಮಲ್ಲಿನ ಕಾಯ್ದೆಯ ಪ್ರಕಾರ ಮೀಸಲಿಟ್ಟ ಶೇಕಡಾ 24.ರಷ್ಟು ಬಜೆಟ್ ಹಣ ಖರ್ಚಾಗದಿದ್ದರೆ ಅದನ್ನು ಮುಂದಿನ ವರ್ಷಕ್ಕೆ ಬಳಸಬಹುದಾಗಿದೆ ಮತ್ತು. ಮೀಸಲಿಟ್ಟ ಅನುದಾನವನ್ನು ಖರ್ಚು ಮಾಡದ ಸಂಬಂಧಿತ ಇಲಾಖಾ ಅಧಿಕಾರಿಗಳ ವಿರುದ್ದ ಕ್ರಮವನ್ನು ಕೈಗೊಳ್ಳಬಹುದಾಗಿದೆ.
2008-09ರಿಂದ 2012-13ನೇ ಸಾಲಿನವರೆಗೆ ಬಿಜೆಪಿ ಸರ್ಕಾರ SC SP/TSP ಯೋಜನೆಯಡಿ ಖರ್ಚು ಮಾಡಿದ್ದು ಕೇವಲ ರೂ.22,261 ಕೋಟಿ. ನಮ್ಮ ಸರ್ಕಾರದ ಅವಧಿಯಲ್ಲಿ ರೂ. 88,395 ಕೋಟಿ. ಯಾರು ದಲಿತ ವಿರೋಧಿ? ನಾನಾ? ಬಿಜೆಪಿ ನಾಯಕರಾ?


2020-21ರ ಕೇಂದ್ರ ಬಜೆಟ್ ನ ಗಾತ್ರ 34 ಲಕ್ಷ ಕೋಟಿ ರೂಪಾಯಿಗಳು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಈ ಬಜೆಟ್ ನ ಶೇಕಡಾ 24ರಷ್ಟನ್ನು ಅವರ ಕಲ್ಯಾಣಕ್ಕಾಗಿ ಮೀಸಲಿಟ್ಟರೆ ಅದು ಎಂಟುವರೆ ಲಕ್ಷ ಕೋಟಿ ರೂಪಾಯಿಗಳಾಗುತ್ತದೆ. ನನ್ನನ್ನು ದಲಿತ ವಿರೋಧಿ ಎಂದು ಆರೋಪಿಸುವವರು ಪ್ರಧಾನಿ ನರೇಂದ್ರಮೋದಿಯವರಿಗೆ ಮನವರಿಕೆ ಮಾಡಿಕೊಟ್ಟು ರಾಜ್ಯದಲ್ಲಿ ನಾನು ಜಾರಿಗೆ ತಂದಿದ್ದ SCP/TSP ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವಂತೆ ಮಾಡಲು ಸಿದ್ದರಿದ್ದಾರೆಯೇ? ಇದು ಬಿಜೆಪಿಯಲ್ಲಿರುವ ದಲಿತ ನಾಯಕರಿಗೆ ನನ್ನ ಸವಾಲು.
2020-21ರ ಕೇಂದ್ರ ಬಜೆಟ್ ನಲ್ಲಿ ಪರಿಶಿಷ್ಟ ಜಾತಿಯ ಕಲ್ಯಾಣಕ್ಕೆ ನೀಡಿರುವ ಅನುದಾನ ರೂ.8030 ಕೋಟಿ ಮತ್ತು ಗುಡ್ಡಗಾಡು ಜನರ ಅಭಿವೃದ್ದಿಗೆ ನೀಡಿರುವ ಅನುದಾನ ರೂ.7524 ಕೋಟಿ. ಬೇರೆ ಯಾವ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಕೇಂದ್ರ ಸರ್ಕಾರ ನೀಡಿದೆ ಎನ್ನುವುದನ್ನು ಬಿಜೆಪಿ ನಾಯಕರೇ ತಿಳಿಸಬೇಕು.


ಪರಿಶಿಷ್ಟ ಜಾತಿ/ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಸೌಲಭ್ಯವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದಾಗ ಕಣ್ಣು ಮುಚ್ಚಿಕೂತಿದ್ದರು ಬಿಜೆಪಿಯ ದಲಿತ ನಾಯಕರು. ಸುಗ್ರಿವಾಜ್ಞೆ ಮೂಲಕ ಆ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಿದ್ದು ನಮ್ಮ ಸರ್ಕಾರ . ಈಗ ನನ್ನ ವಿರುದ್ದ ಘೋಷಣೆ ಕೂಗುತ್ತಿರುವ ಕೆಲವು ನಾಯಕರೇ ನನ್ನ ಪರವಾಗಿ ಜೈಕಾರ ಹಾಕಿದ್ದರು.
ಪರಿಶಿಷ್ಟ ಜಾತಿ/ಪಂಗಡದ ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿ ವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ಶೇಕಡಾ 18ರಷ್ಟು ಮೀಸಲಾತಿ ನೀಡಿ ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ನಮ್ಮ ಸರ್ಕಾರ. ದೇಶದಲ್ಲಿ ಯಾವ ಸರ್ಕಾರ ಕೂಡಾ ನೀಡದೆ ಇದ್ದ ಸೌಲಭ್ಯವನ್ನು ಮೊದಲ ಬಾರಿಗೆ ಜಾರಿಗೆ ತಂದದ್ದು ನಮ್ಮ ಸರ್ಕಾರ. ಬಿಜೆಪಿ ದಲಿತರ ಪರ ಎಂದು ಹೇಳುತ್ತಿರುವ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಿ ರಾಷ್ಟ್ರಮಟ್ಟದಲ್ಲಿ ದಲಿತರಿಗೆ ಈ ಅನುಕೂಲವನ್ನು ಮಾಡಿಕೊಡಲು ಸಾಧ್ಯವಿದೆಯೇ?


ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ (2018-2013) ಪರಿಶಿಷ್ಟ ಜಾತಿ/ಪಂಗಡಗಳ ಆಶ್ರಮ ಶಾಲೆ,ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆಹಾರಕ್ಕಾಗಿ ಮಾಸಿಕವಾಗಿ ನೀಡುತ್ತಿದ್ದ ಹಣ ರೂ,600,ರೂ. 750 ಮತ್ತು ರೂ.850. ಅದನ್ನು ಕ್ರಮವಾಗಿ ರೂ.1300,ರೂ.1500 ಮತ್ತು ರೂ.1600ಕ್ಕೆ ಹೆಚ್ಚಿಸಿದ್ದು ನಮ್ಮ ಸರ್ಕಾರ. ನಮ್ಮ ಸರ್ಕಾರ ಹೋಬಳಿಗೊಂದು ಪ.ಜಾ/ಪ.ಪಂ ವಸತಿ ಶಾಲೆಯಂತೆ 270 ಹೊಸ ವಸತಿ ಶಾಲೆ ಹಾಗೂ 200 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿತ್ತು.. ಇದರಿಂದ 74,300 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರವೇಶಾವಕಾಶ ಸಿಕ್ಕಿದೆ. ಬಿಜೆಪಿ ಸರ್ಕಾರದ ಸಾಧನೆ ಏನು?


ಪ.ಜಾ/ಪ.ಪಂ. ಉದ್ಯಮಿಗಳಿಗೆ KSFC ಮೂಲಕ ಶೇ.4 ರ ಬಡ್ಡಿಯಲ್ಲಿ ರೂ.10 ಕೋಟಿ ವರೆಗೆ ಸಾಲ. ಈ ಸೌಲಭ್ಯ ರಾಷ್ಟ್ರೀಕೃತ ಬ್ಯಾಂಕುಗಳಿಗೂ ವಿಸ್ತರಣೆ. ಈ ಮೂಲಕ 1,597 ಉದ್ಯಮಿಗಳಿಗೆ 908 ಕೋಟಿ ರೂ. ಸಾಲ. ದಲಿತರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದ ಇಂತಹ ಯಾವ ಯೋಜನೆಗಳನ್ನು ಬಿಜೆಪಿ ಸರ್ಕಾರ ರೂಪಿಸಿದೆ ಎಂದು ಆ ಪಕ್ಷದ ದಲಿತ ನಾಯಕರು ತಿಳಿಸಬೇಕು.
ಪ.ಜಾ/ಪ.ಪಂ ಸಮುದಾಯದ ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ/ಅತಿ ಸೂಕ್ಷ್ಮ 72 ಸಮುದಾಯಗಳನ್ನು ಗುರುತಿಸಿ ರೂ.222 ಕೋಟಿ ವೆಚ್ಚದಲ್ಲಿ ಅವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ದಿಗಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು ನಮ್ಮ ಸರ್ಕಾರ.
ನಮ್ಮ ಸರ್ಕಾರ 840 ಕೋಟಿ ರೂ. ವೆಚ್ಚದಲ್ಲಿ ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಂ ಮತ್ತು ಮಹರ್ಷಿ ವಾಲ್ಮೀಕಿ ಯವರ ಹೆಸರಲ್ಲಿ 8,199 ಭವನಗಳ ನ್ನು ನಿರ್ಮಿಸಿತ್ತು. ನನ್ನನ್ನು ದಲಿತ ವಿರೋಧಿ ಎಂದು ಹೇಳುವವರು ಬಿಜೆಪಿ ಕಾಲದಲ್ಲಿ ಕಟ್ಟಿದ್ದೆಷ್ಟು ಎಂದು ಲೆಕ್ಕ ಹೇಳಲಿ.


ನಮ್ಮ ಸರ್ಕಾರ 1,494 ಕೋಟಿ ರೂ. ವೆಚ್ಚದಲ್ಲಿ ಪ.ಜಾ/ಪ.ಪಂ ವಿದ್ಯಾರ್ಥಿನಿಲಯಗಳ ಸ್ವಂತ ಕಟ್ಟಡ,1,537 ಕೋಟಿ ರೂ. ವೆಚ್ಚದಲ್ಲಿ, 129 ವಸತಿ ಶಾಲಾ ಸಂಕೀರ್ಣ ನಿರ್ಮಾಣ, 16 ವಿಶ್ವವಿದ್ಯಾಲಯಗಳಲ್ಲಿ 116 ಕೋಟಿ ರೂ.ವೆಚ್ಚದಲ್ಲಿ ಸ್ನಾತಕೋತ್ತರ ವಸತಿನಿಲಯ ನಿರ್ಮಿಸಿದೆ. ಬಿಜೆಪಿ ಸರ್ಕಾರ ಏನು ಮಾಡಿದೆ? ಎರಡುವರೆ ಲಕ್ಷ ಪ.ಜಾ/ಪ.ಪಂ ಫಲಾನುಭವಿಗಳು ವಿವಿಧ ಅಭಿವೃದ್ದಿ ನಿಗಮದಿಂದ ಪಡೆದಿದ್ದ ರೂ.581 ಕೋಟಿ ಸಾಲ ಮನ್ನಾ ಮಾಡಿದ್ದು ನಮ್ಮ ಸರ್ಕಾರ. ಬಿಜೆಪಿ ಸರ್ಕಾರ ಈ ಸಮುದಾಯದ ಫಲಾನುಭವಿಗಳ ಎಷ್ಟು ಸಾಲ ಮನ್ನಾ ಮಾಡಿದೆ? ನಾನು ಮುಸ್ಲಿಮ್ ವಿರೋಧಿ ಎಂಬ ಬೊಬ್ಬಿಟ್ಟ ಪಕ್ಷದ ಅಭ್ಯರ್ಥಿಗಳ ಠೇವಣಿ ಜಪ್ತಿ ಮಾಡಿಸಿ ಉಪ ಚುನಾವಣೆಯಲ್ಲಿ ಮತದಾರರು ಉತ್ತರ ಕೊಟ್ಟಿದ್ದಾರೆ. ಈಗ ಬಿಜೆಪಿಯ ಕೆಲವು ತಥಾಕಥಿತ ದಲಿತ ನಾಯಕರು ನಾನು ದಲಿತ ವಿರೋಧಿ ಎಂದು ಕೂಗಾಡುತ್ತಿದ್ದಾರೆ, ಅವರಿಗೂ ಮತದಾರರೇ ಉತ್ತರ ನೀಡುತ್ತಾರೆ.

Join Whatsapp
Exit mobile version