Home ಅಂಕಣಗಳು ಸತ್ಯ ಮತ್ತು ವಿಶ್ವಾಸದ ಜಯವನ್ನು ಸಾಕ್ಷೀಕರಿಸುವ ಬಕ್ರೀದ್

ಸತ್ಯ ಮತ್ತು ವಿಶ್ವಾಸದ ಜಯವನ್ನು ಸಾಕ್ಷೀಕರಿಸುವ ಬಕ್ರೀದ್

0

ನುಸೈಬಾ ಕಲ್ಲಡ್ಕ

ತ್ಯಾಗ, ಬಲಿದಾನಗಳ ಉದಾತ್ತ ಸಂದೇಶವನ್ನೀಯುವ ಬಕ್ರೀದ್ ಮತ್ತೆ ಅನುಗಮಿಸಿದೆ. ಹಬ್ಬಗಳು ಕೇವಲ ತಿಂದುಂಡು ತೇಗುವ ಆಚರಣೆಗಳಾಗದೆ ಅವುಗಳ ಅಂತಃಸತ್ವವನ್ನು ಅರ್ಥೈಸಿ ಬದುಕಿನಲ್ಲಿ ಅಳವಡಿಸಿದಾಗಲೇ ಆಚರಣೆಗಳು ಕೂಡ ಹೆಚ್ಚು ಅರ್ಥಪೂರ್ಣವೆನಿಸುತ್ತದೆ.


ಅಚಂಚಲ ವಿಶ್ವಾಸ ಹಾಗೂ ಅದಮ್ಯ ಭಕ್ತಿಯೊಂದಿಗೆ ಸೃಷ್ಟಿಕರ್ತನ ಆಜ್ಞಾನುಸಾರ ಬದುಕು ಸವೆಸಿ ಸರಿಸಾಟಿ ಇಲ್ಲದ ತ್ಯಾಗೋಜ್ವಲ ಬದುಕಿಗೆ ಅತ್ಯುತ್ತಮ ಆದರ್ಶವೆನಿಸಿದ ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಂ ರ ಜೀವನ ಸ್ಮರಣೆಯೇ ಬಕ್ರೀದ್.
ಅಂಧಾಚರಣೆಗಳು ತಾಂಡವವಾಡುತ್ತಿದ್ದ ಇರಾಕಿನ ಬ್ಯಾಬಿಲೋನಿಯಾದಲ್ಲಿ , ಸ್ವಯಂ ಘೋಷಿತ ದೈವ ನಮ್ರೂದನ ಆಡಳಿತ ಕಾಲದಲ್ಲಿ ಸರ್ವಾಧಿಕಾರಿ ರಾಜನ ವಿರುದ್ಧ ಬಂಡಾಯ ಸಾರಿ ಸತ್ಯದ ಪ್ರಖರತೆಯನ್ನು ಎತ್ತಿ ಹಿಡಿದ ಇಬ್ರಾಹಿಂ ಅಲೈಹಿಸ್ಸಲಾಂ ಇಸ್ಲಾಮಿ ಜಗತ್ತಿನ ಕ್ರಾಂತಿಕಾರಿ ನಾಯಕ. ದೇವನ ಸಂತೃಪ್ತಿಗಾಗಿ ಸರ್ವಸ್ವ ತ್ಯಾಗಕ್ಕೂ ಸಿದ್ಧರಾದ ಅವರ ಧರ್ಮನಿಷ್ಠೆ , ಅರ್ಪಣಾ ಮನೋಭಾವ ಮನುಕುಲಕ್ಕೆ ಸ್ಪೂರ್ತಿಯಾಗಿದೆ.
ಅಲ್ಲಾಹನಲ್ಲದೆ ಆರಾಧ್ಯರಿಲ್ಲ ಎನ್ನುತ್ತಾ ಸತ್ಯ ಧರ್ಮ ಪ್ರಚಾರ ಕಾರ್ಯವು ಮನೆಯಿಂದಲೇ ಆರಂಭವಾದಾಗ ಸ್ವತಃ ತಂದೆಯೇ ಮನೆಯಿಂದ ಹೊರದಬ್ಬಿದರು ‌.

ರಾಜನನ್ನೇ ಧಿಕ್ಕರಿಸಿದ ಕಾರಣಕ್ಕಾಗಿ ಅಗ್ನಿ ಕುಂಡಕ್ಕೆ ಎಸೆಯಲಾಯಿತಾದರೂ ಅಲ್ಲಾಹನೊಂದಿಗಿನ ಅಚಲವಾದ ವಿಶ್ವಾಸದಿಂದಾಗಿ ಅಗ್ನಿ ಕುಂಡವೂ ಇಬ್ರಾಹಿಂ ಅಲೈಹಿಸ್ಸಲಾಂ ರ ಪಾಲಿಗೆ ಹೂದೋಟವಾಗಿ ಮಾರ್ಪಟ್ಟಿತು.
ಇದರಿಂದ ಇನ್ನಷ್ಟು ಕೆರಳಿದ ನಮ್ರೂದ್ ತಾಯ್ನಾಡಿನಿಂದಲೇ ಗಡೀಪಾರು ಮಾಡಿದ. ಹೀಗೆ ಒಂದರ ಮೇಲೊಂದರಂತೆ ಪರೀಕ್ಷೆಗಳನ್ನು ಎದುರಿಸುತ್ತಾ ಇಬ್ರಾಹಿಂ ಅಲೈಹಿಸ್ಸಲಾಂ ಧರ್ಮ ಪ್ರಚಾರ ಕಾರ್ಯ ಮುಂದುವರಿಸಿದರು.


ತೊಂಬತ್ತರ ಇಳಿ ವಯಸ್ಸಿನಲ್ಲಿ ಪಡೆದ ಪುತ್ರ ಸೌಭಾಗ್ಯವನ್ನೂ ಕೂಡ ಹೆಚ್ಚು ಕಾಲ ಅನುಭವಿಸಲಾಗಲಿಲ್ಲ. ಸೃಷ್ಟಿಕರ್ತನ ಆಜ್ಞೆಯ ಮೇರೆಗೆ ಪತ್ನಿ ಹಾಜಿರಾ ಹಾಗೂ ಹಸುಗೂಸು ಇಸ್ಮಾಯಿಲ್ ರನ್ನು ಮಕ್ಕಾದ ಸಫಾ ಮರ್ವ ಪರ್ವತಗಳ ನಡುವಿನ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿಸಿ ಹೊರಟೇ ಬಿಟ್ಟರು. ಅಲ್ಲಾಹನ ಆಜ್ಞೆಯ ಅನುಸಾರವೇ ಪತಿಯ ಈ ನಿರ್ಧಾರ ಎಂದು ಮನಗಂಡ ಪತ್ನಿ ಹಾಜಿರಾ ಮಗುವನ್ನು ಅಪ್ಪಿಕೊಂಡರು. ಕೈಯಲ್ಲಿದ್ದ ನೀರು ಮತ್ತು ಖರ್ಜೂರ ಖಾಲಿಯಾದಾಗ ಮಗುವಿಗೆ ಹಾಲಿಲ್ಲದಾಯಿತು. ಹನಿ ನೀರಿಗಾಗಿ ತಾಯಿ ಮಗು ಪರಿತಪಿಸಿದರು.‌ ಯಾರಾದರೂ ಕಾಣಸಿಗುವರೇ ಎಂಬ ಕಾತರದಿಂದ ಸಫಾ ಬೆಟ್ಟದ ಮೇಲೇರಿದರು. ಇಲ್ಲ, ಯಾರೂ ಕಾಣಲಿಲ್ಲ. ಕೆಳಗಿಳಿದು ಬಂದು ಮರ್ವ ಬೆಟ್ಟದ ಮೇಲೇರಿದರು. ಇಲ್ಲ, ಯಾರೂ ಇಲ್ಲ. ಮತ್ತೆ ಸಫಾ ಬೆಟ್ಟದ ಮೇಲೇರಿದರು. ಕೆಳಗಿಳಿದರು. ಮತ್ತೆ ಮರ್ವ ಪರ್ವತ. ಹೀಗೆ ಏಳು ಬಾರಿ ಅತ್ತಿಂದಿತ್ತ ಓಡಾಡಿದರು. ಈ ಓಡಾಟದ ಪ್ರತೀಕವೇ ಇಂದು ಹಜಾಜಿಗಳ ಹಜ್ ಕರ್ಮದ ಒಂದು ಭಾಗವಾಗಿರುವ ಸಫಾ ಮರ್ವ ನಡುವಿನ ಓಡಾಟ.
ಯಾರೂ ಕಾಣದೆ ಹಾಜಿರಾ ನಿರಾಸೆಯಿಂದ ಮಗುವಿನ ಬಳಿ ಮರಳಿದರೆ ಅಲ್ಲೊಂದು ಅದ್ಬುತ ಕಾದಿತ್ತು. ದಾಹದಿಂದ ಅಳುತ್ತಿದ್ದ ಪುಟ್ಟ ಮಗು ಇಸ್ಮಾಯಿಲ್ ಕಾಲು ಬಡಿದ ಜಾಗದಲ್ಲಿ ನೀರಿನ ಒರತೆ ಉಂಟಾಗಿತ್ತು. ಹಾಜಿರಾ ಅಲ್ಲಾಹನನ್ನು ಸ್ತುತಿಸಿದರು. ಇದಾಗಿದೆ ಇಂದು ಮುಸ್ಲಿಮ್ ಜಗತ್ತು ಹಾತೊರೆದು ಕುಡಿಯುತ್ತಿರುವ ಝಮ್ ಝಮ್ ನೀರು.
ಈ ಘಟನಾನಂತರ ಮಕ್ಕಾ ಮರುಭೂಮಿಯ ಚಿತ್ರಣವೇ ಬದಲಾಯಿತು. ನಿರ್ಜನ ಪ್ರದೇಶವು ಜನದಟ್ಟಣೆಯ ಪ್ರದೇಶವಾಗಿ ವ್ಯಾಪಾರಿ ಸಂಘಗಳು ಅಲ್ಲೇ ನೆಲೆಯೂರತೊಡಗಿದರು.


ಕಾಲ ಚಕ್ರ ಉರುಳುತ್ತಿತ್ತು. ಮಗು ಇಸ್ಮಾಯಿಲ್ ಪ್ರೌಢಾವಸ್ಥೆಗೆ ತಲುಪಿದಾಗ ಮಗನನ್ನು ಬಲಿಯರ್ಪಿಸಬೇಕೆಂಬ ಮತ್ತೊಂದು ದೈವಾಜ್ಞೆಯೊಂದಿಗೆ ಇಬ್ರಾಹಿಂ ಅಲೈಹಿಸ್ಸಲಾಂ ಪತ್ನಿ ಮತ್ತು ಪುತ್ರನನ್ನು ಸಮೀಪಿಸುತ್ತಾರೆ.
“ಅಲ್ಲಾಹನು ನಿಮ್ಮೊಂದಿಗೆ ಕಲ್ಪಿಸಿದ್ದನ್ನು ನೀವು ಮಾಡಿರಿ, ಹಿಂಜರಿಯಬೇಡಿರಿ” ಮಗನ ದೃಢವಾದ ಮಾತುಗಳು. ಸ್ರಷ್ಟಿಕರ್ತನ ಆಜ್ಞೆಗೂ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಇಲಾಹನ ಮೇಲಿನ ಸಂಪೂರ್ಣ ಭರವಸೆಯೊಂದಿಗೆ ಪತ್ನಿ ಹಾಜಿರಾ ತನ್ನ ಕರುಳ ಕುಡಿಯನ್ನು ಪತಿಯ ಕೈಗೆ ಒಪ್ಪಿಸಿದರು.
ಇಬ್ರಾಹಿಂ ಅಲೈಹಿಸ್ಸಲಾಂ ತಡಮಾಡದೆ ಬಲಿ ಅರ್ಪಣೆಗೆ ಸಿದ್ಧರಾದರು. ಮಗನನ್ನು ಮಲಗಿಸಿ ಇನ್ನೇನು ಕೊರಳು ಕೊಯ್ಯಬೇಕು ಎನ್ನುವಷ್ಟರಲ್ಲಿ ಅಶರೀರವಾಣಿಯೊಂದು‌ ಕೇಳಿ ಬಂದಿತ್ತು.
ಮಗನ ಬದಲಾಗಿ ಆಡನ್ನು ಬಲಿ ಅರ್ಪಿಸಲು ನಿರ್ದೇಶಿಸಲಾಯಿತು.
ಈ ಸಮಯದಲ್ಲಿ ಇಲಾಹೀ ಮಹಿಮೆಯನ್ನು ಸಾರುತ್ತಾ ಇಬ್ರಾಹಿಂ ಅಲೈಹಿಸ್ಸಲಾಂ “ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್” ಎಂದು
ತಕ್ಬೀರ್ ಮೊಳಗಿಸಿದರು.
“ಲಾಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್”, ಇಸ್ಮಾಯಿಲ್ ಅಲೈಹಿಸ್ಸಲಾಂ ದನಿಗೂಡಿಸಿದರು . “ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಂದ್ “,
ಜಿಬ್ರೀಲ್ ಅಲೈಹಿಸ್ಸಲಾಂ
ಮುಂದುವರೆಸಿದರು.
(ಕುರ್ ಆನ್ ಅಧ್ಯಾಯ 37ರ 100ಮತ್ತು 107 ರಲ್ಲಿ ಇದರ ಉಲ್ಲೇಖವಿದೆ.)
ಇಂದು ಜಾಗತಿಕವಾಗಿ ಮೊಳಗುತ್ತಿರುವ ಸುಶ್ರಾವ್ಯ ತಕ್ಬೀರ್ ನ ತಾತ್ಪರ್ಯವಿದು.

ತಂದೆ , ತಾಯಿ, ಮಗನನ್ನು ಒಳಗೊಂಡ ಒಂದು ಕುಟುಂಬದ ಅಭೂತಪೂರ್ವ ತ್ಯಾಗದ ಭಾವನಾತ್ಮಕ ಕ್ಷಣಕ್ಕೆ ದುಲ್ ಹಜ್ ಮಾಸವು ಸಾಕ್ಷಿಯಾಗಿತ್ತು .
ಎಂತಹ ಕಠಿಣ ಪರಿಸ್ಥಿತಿಯಲ್ಲೂ ಅಲ್ಪವೂ ಹಿಂಜರಿಯದೆ ಸತ್ಯ ವಿಶ್ವಾಸದ ಹಾದಿಯಲ್ಲಿ ದೃಢವಾಗಿ ನಿಂತು , ಇಲಾಹೀ ಸಂಪ್ರೀತಿಗಾಗಿ ಇಹಲೋಕವನ್ನು ನಗಣ್ಯವಾಗಿ ಕಂಡ ಇಬ್ರಾಹಿಂ ಅಲೈಹಿಸ್ಸಲಾಂ
ವಿಶ್ವ ಜನತೆಗೆ ಸತ್ಯದ ಹಾದಿಯನ್ನು ತೆರೆದುಕೊಟ್ಟರು.
ದೇವಾನುಸರಣೆಯ ಹಾದಿಯಲ್ಲಿ , ವರ್ತಮಾನದ ಸರ್ವಾಧಿಕಾರದ ನೀತಿಯಲ್ಲಿ ಪೀಡನೆಗಳು ಸಹಜವಾಗಿರುವಾಗ, ಸೃಷ್ಟಿಕರ್ತನ ಮೇಲಿನ ಸಂಪೂರ್ಣ ಭರವಸೆಯೊಂದಿಗೆ ಅವುಗಳನ್ನು ಎದುರಿಸಲು ಬಕ್ರೀದ್ ಪ್ರೇರಣೆಯಾಗಲಿ , ಬಸವಳಿದ ಜೀವಗಳಲ್ಲಿ ಜೀವನೋತ್ಸಾಹ ತುಂಬಲಿ ಎಂಬ ಹಾರೈಕೆಯೊಂದಿಗೆ..

NO COMMENTS

LEAVE A REPLY

Please enter your comment!
Please enter your name here

Exit mobile version